ನಾಳೆಯಿಂದ ವಿಧಾನ ಮಂಡಲ ಅಧಿವೇಶನ: ಆಡಳಿತ-ಪ್ರತಿಪಕ್ಷ ನಡುವೆ ಜಟಾಪಟಿ ಸಾಧ್ಯತೆ

ಬೆಂಗಳೂರು: ವಿಧಾನಮಂಡಲದ ಮಳೆಗಾಲದ ಅಧಿವೇಶನವು ನಾಳೆ(ಸೆಪ್ಟಂಬರ್‌ 12)ಯಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹಲವು ವಿಧೇಯಕಗಳು ಮಂಡನೆಯಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಡಿ ನಡೆಯುವ ಸಾಧ್ಯತೆಗಳಿವೆ. ಆಡಳಿತ ಪಕ್ಷದ ವೈಖರಿಯನ್ನು ಪ್ರಶ್ನಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತಯಾರಿ ಮಾಡಿಕೊಂಡಿವೆ ಎಂದು ವರದಿಯಾಗಿದೆ.

ಈಗಾಗಲೇ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಸಾಲು ಸಾಲು ವಿಚಾರಗಳು ಪ್ರಸ್ತಾಪವಾಗಲಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನ ಕಟ್ಟಿ ಹಾಕಲು ತಯಾರಿ ಮಾಡಿಕೊಂಡಿದೆ. ಇಷ್ಟಲ್ಲದೇ ಅಧಿವೇಶನದಿಂದಲೇ 2023ರ ಚುನಾವಣೆಗೆ ರಣಕಹಳೆ ಊದಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಂತಿದೆ.

ಪಿಎಸ್‌ಐ ನೇಮಕಾತಿ ಹಗರಣ, ಶೇ 40ರಷ್ಟು ಕಮಿಷನ್‌ ಆರೋಪ, ಲೋಕೋಪಯೋಗಿ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳಲ್ಲಿ ಭ್ರಷ್ಟಾಚಾರದ ಆರೋಪ, ಮಳೆಯಿಂದ ಬೆಂಗಳೂರು ಮುಳುಗಿದ ವಿಚಾರಗಳು ಚರ್ಚೆಗೆ ಒಳಪಡುವ ಸಾಧ್ಯತೆಗಳಿವೆ.

ಪಠ್ಯ ಪುಸ್ತಕ ಪರಿಷ್ಕರಣೆ, ಮಹನೀಯರು ಪಠ್ಯಗಳನ್ನು ಕೈಬಿಟ್ಟಿರುವ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.  ಬೆಂಗಳೂರು ಮಳೆ ಅನಾಹುತದಿಂದಾಗಿ ನಗರದ ಜನತೆ ಸಂಕಷ್ಟಕ್ಕೆ ಒಳಗಾಗಿರುವ ವಿಚಾರಗಳು ಪ್ರಸ್ತಾಪವಾಗಲಿದೆ ಎನ್ನಲಾಗಿದೆ. ಬೆಂಗಳೂರಿನ ನಿರ್ವಾಹಣೆ ಬಿಜೆಪಿ ಕಾಲದಲ್ಲಿ ಸರಿಯಾಗಿ ಆಗಿಲ್ಲ. ಇವತ್ತಿನ ಪರಿಸ್ಥಿತಿಗೆ ಬಿಜೆಪಿ ಕಾರಣ ಅಂತ ಸದನದಲ್ಲಿ ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಸಿದ್ದವಾಗಿದೆ.

ರಾಜ್ಯದಲ್ಲಿ ಕಳೆದ 16 ವರ್ಷಗಳಲ್ಲಿ 11 ವರ್ಷ ಬಿಜೆಪಿಯೇ ಅಧಿಕಾರ ನಡೆಸಿದ್ದು, ಎಲ್ಲ ಕಾಲದ ಹಗರಣಗಳೂ ಸೇರಿಸಿ ತನಿಖೆ ನಡೆಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಆಡಳಿತ ಪಕ್ಷ ಬಿಜೆಪಿಯು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹಳೇ ಕೇಸ್ ಮೂಲಕ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. 2015ರಲ್ಲಿ ಅರ್ಕಾವತಿ ಬಡಾವಣೆಯ 541 ಎಕರೆ ರೀಡು ಡಿನೋಟಿಫೈ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಿನ ಕಾಂಗ್ರೆಸ್ ಸರ್ಕಾರವೇ ನ್ಯಾ.ಕೆಂಪಣ್ಣ ಆಯೋಗ ರಚಿಸಿತ್ತು. ಈ ಆಯೋಗ 2017ರ ಆಗಸ್ಟ್ 23ರಂದು ಸರ್ಕಾರಕ್ಕೆ 4 ಸಂಪುಟಗಳಲ್ಲಿ ಸುಮಾರು 9 ಸಾವಿರ ಪುಟಗಳ ಅಂತಿಮ ವರದಿ ಸಲ್ಲಿಸಿದೆ. ಆದರೆ 5 ವರ್ಷವಾದ್ರೂ ಶಾಸನ ಸಭೆಯಲ್ಲಿ ಇಲ್ಲಿ ತನಕ ಆಯೋಗದ ವರದಿ ಮಂಡನೆ ಆಗಿಲ್ಲ. ಈಗ ಪ್ರಸಕ್ತ ಅಧಿವೇಶನದಲ್ಲಿ ವರದಿ ಮಂಡಲೆಯಾಗಲಿದೆ ಎನ್ನಲಾಗಿದೆ.

ಕೆಂಪಣ್ಣ ಆಯೋಗದ ವರದಿ ಸದನದಲ್ಲಿ ಮಂಡಿಸಿ ತನಿಖೆಗೆ ಒಪ್ಪಿಸುವ ಬಗ್ಗೆ ಚರ್ಚೆ, ಇದರೊಂದಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ನಡೆದ ಸೋಲಾರ್ ಹಗರಣ ಪ್ರಸ್ತಾಪಕ್ಕೂ ಸಿದ್ಧತೆ ನಡೆದಿದೆ. ವಿದ್ಯುತ್ ಖರೀದಿಯಲ್ಲಿ ಆಗಿರೋ ಅಕ್ರಮ, ಸಿದ್ದರಾಮಯ್ಯ ಕಾಲದಲ್ಲಿ ಇಂಧನ ಇಲಾಖೆಯಲ್ಲಿನ ವಿದ್ಯುತ್ ಹಗರಣ ಹಾಗೂ 2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಅಕ್ರಮದ ಹಗರಣ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಸಿದ್ದು ಕಾಲದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಒತ್ತಾಯಿಸುವ ಸಾಧ್ಯತೆಗಳಿವೆ.

ಈ ನಡುವೆ ಜೆಡಿಎಸ್‌ ಸಹ ಆಡಳಿತ ಪಕ್ಷದ ವೈಫ‌ಲ್ಯಗಳನ್ನು ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಬೆಂಗಳೂರು-ಮೈಸೂರು ಹೈವೇ ಅವಾಂತರ ವಿಚಾರ ಚರ್ಚೆಗೆ ಪಟ್ಟು ಹಿಡಿಯಲು ತೀರ್ಮಾನಿಸಿದೆ.

Donate Janashakthi Media

Leave a Reply

Your email address will not be published. Required fields are marked *