– ಭವಿಷ್ಯದೆಡೆಗೆ. ಸುಭದ್ರ ಕರ್ನಾಟಕದೆಡೆಗೆ ಘೋಷಣೆಯಡಿ 2700 ಕಿಮೀ ಯಾತ್ರೆ
– ಸೋಮವಾರ ಕೋಲಾರದಲ್ಲಿ ಸೈಕಲ್ ಯಾತ್ರೆಗೆ ಚಾಲನೆ
ಬೆಂಗಳೂರು: ಕೊರೋನವೈರಸ್ ತಂದೊಡ್ಡಿರುವ ವಿಪತ್ತು, ಜನರ ಸಮಸ್ಯೆಗಳು ಮತ್ತು ಅದರ ಪರಿಹಾರಗಳು, ಸರ್ಕಾರ ಮಾಡಬೇಕಾಗಿರುವ ಕೆಲಸ, ಜನರ ಸಹಭಾಗಿತ್ವ ಮತ್ತು ಜವಾಬ್ದಾರಿ, ಮುಂತಾದ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರು ಸ್ಥೈರ್ಯದಿಂದ ಮುನ್ನಡೆಯುವಂತೆ ಪ್ರೇರೇಪಿಸಲು, “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷವು ಮೂರು ಹಂತದ ಒಟ್ಟು 2700 ಕಿಲೋಮೀಟರ್‌ಗಳ ರಾಜ್ಯವ್ಯಾಪಿ ಸೈಕಲ್ ಯಾತ್ರೆಯನ್ನು ಆಯೋಜಿಸಿದೆ.
ಮೊದಲ ಹಂತದ ಸೈಕಲ್ ಯಾತ್ರೆಗೆ ಸೋಮವಾರ (ಸೆ.14, 2020) ಕೋಲಾರದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಕಳೆದ ಆರೇಳು ತಿಂಗಳಿನಿಂದ ರಾಜ್ಯದ ಜನರದೂ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಜನರ ಬದುಕು ಅಯೋಮಯವಾಗಿದೆ, ಅನಿಶ್ಚಿತತೆಯಿಂದ ಕೂಡಿದೆ. ಕೆಲವರದು ಮಾತ್ರ ಅಷ್ಟೇನೂ ತೊಂದರೆಗಳಿಲ್ಲದೆ ನಡೆಯುತ್ತಿದ್ದರೆ, ಬಹುತೇಕರದು ಮುಗ್ಗರಿಸಿದೆ, ಸ್ತಬ್ಧವಾಗಿದೆ, ನಿಶ್ಚಲವಾಗಿದೆ.
ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ; ನಿರುದ್ಯೋಗ ಹೆಚ್ಚಾಗಿದೆ; ಶಾಲಾ-ಕಾಲೇಜುಗಳು ಮುಚ್ಚಿವೆ; ಆರೋಗ್ಯವ್ಯವಸ್ಥೆ ನರಳುತ್ತಿದ್ದು, ಆಸ್ಪತ್ರೆಗಳು ಬಸವಳಿದಿವೆ; ಕೃಷಿವಲಯ ದಾರುಣ ಸಂಕಷ್ಟವನ್ನು ಅನುಭವಿಸುತ್ತಿದೆ; ಕಾರ್ಖಾನೆಗಳಲ್ಲಿ ಉತ್ಪಾದನೆ ತೀವ್ರವಾಗಿ ಕುಂಠಿತವಾಗಿದೆ; ಹೋಟೆಲ್ ಉದ್ಯಮವೂ ಸೇರಿದಂತೆ ಸೇವಾವಲಯವು ಎದ್ದೇಳಲಾಗದ ಸ್ಥಿತಿ ಮುಟ್ಟಿದೆ; ಸರ್ಕಾರಿ ಕಚೇರಿಗಳು ಪೂರ್ಣಮಟ್ಟದಲ್ಲಿ ಕಾರ್ಯ ನಿರ್ವಹಿಸದ ಕಾರಣ ಜನರಿಗೆ ಸೇವಾಸೌಲಭ್ಯಗಳು ಸಿಗುತ್ತಿಲ್ಲ; ಪೋಲಿಸ್ ಠಾಣೆಗಳು ಮತ್ತು ಕೋರ್ಟ್ ಕಲಾಪಗಳು ಸರಿಯಾಗಿ ನಡೆಯದೆ ನ್ಯಾಯ ದೂರವಾಗಿದೆ; ಒಟ್ಟಾರೆಯಾಗಿ ಜನಜೀವನ ಸಂಕಷ್ಟದಲ್ಲಿದೆ. ಆರ್ಥಿಕ, ಸಾಮಾಜಿಕ, ಕೌಟುಂಬಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತಾವು ತಡೆದುಕೊಳ್ಳಲಾಗದಷ್ಟು ಮಟ್ಟದಲ್ಲಿ ಜನರು ಅನುಭವಿಸುತ್ತಿದ್ದಾರೆ.
ಆದರೂ ಜೀವನ ನಡೆಯಲೇಬೇಕು. ಆಶಾವಾದದಿಂದ, ಕ್ರಿಯಾಶೀಲತೆಯಿಂದ, ಎಚ್ಚರಿಕೆಯಿಂದ ನಾವು ಮುನ್ನಡೆಯಬೇಕು, ಚಲಿಸಬೇಕು, ಜೀವನವನ್ನು ಕಟ್ಟಿಕೊಳ್ಳಬೇಕು.
ಈ ಹಿನ್ನೆಲೆಯಲ್ಲಿ, ಕೊರೋನವೈರಸ್ ತಂದೊಡ್ಡಿರುವ ವಿಪತ್ತು, ಜನರ ಸಮಸ್ಯೆಗಳು ಮತ್ತು ಅದರ ಪರಿಹಾರಗಳು, ಸರ್ಕಾರ ಮಾಡಬೇಕಾಗಿರುವ ಕೆಲಸ, ಜನರ ಸಹಭಾಗಿತ್ವ ಮತ್ತು ಜವಾಬ್ದಾರಿ, ಮುಂತಾದ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರು ಸ್ಥೈರ್ಯದಿಂದ ಮುನ್ನಡೆಯುವಂತೆ ಪ್ರೇರೇಪಿಸಲು, “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷವು ಮೂರು ಹಂತದ ಒಟ್ಟು 2700 ಕಿಲೋಮೀಟರ್‌ಗಳ ರಾಜ್ಯವ್ಯಾಪಿ ಸೈಕಲ್ ಯಾತ್ರೆಯನ್ನು ಆಯೋಜಿಸಿದೆ. ಮೊದಲ ಹಂತದ ಸೈಕಲ್ ಯಾತ್ರೆಗೆ ನಾಳೆ (14-09-2020) ಕೋಲಾರದಲ್ಲಿ ಚಾಲನೆ ನೀಡಲಾಗುತ್ತಿದೆ
ಯಾತ್ರೆಯು ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 13 ಜಿಲ್ಲೆಗಳಲ್ಲಿ ಹಾದು ಹೋಗಲಿದೆ.