ಬೆಂಗಳೂರು : ‘ನಾವು ಹಳೇ ನೋಟು ಕೊಡ್ತಿವಿ ನಮಗೆ ಹೊಸ ನೋಟು ಕೊಡಿ, ಪರ್ಸೆಂಟೇಜ್ ಕಡಿಮೆ ಆದ್ರೂ ಪರ್ವಾಗಿಲ್ಲ’ ಎಂದು ನಕಲಿ ನೋಟುಗಳನ್ನ ಕೊಟ್ಟು ವಂಚನೆ ಮಾಡುತ್ತಿದ್ದ ಆರೋಪದಲ್ಲಿ ಗೋವಿಂದನಗರದ ಪೊಲೀಸರು 7 ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರಿಂದ ಆರು ಕೋಟಿ ನಕಲಿ ಮತ್ತು 70 ಲಕ್ಷ ರೂ ಮೌಲ್ಯದ ಅಸಲಿ ನೋಟುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಆರ್. ಪುರಂ ಬಟ್ಟೆ ವ್ಯಾಪಾರಿ ಸುರೇಶ್ ಕುಮಾರ್, ರಾಜಾಜಿನಗರದ ಬಟ್ಟೆ ವ್ಯಾಪಾರಿ ರಾಮಕೃಷ್ಣ, ಆನೇಕಲ್ ಮೂಲದ ರೈತ ಮಂಜುನಾಥ್, ಬೆಂಗಳೂರಿನ ಹೊಂಗಸಂದ್ರದ ನಿವಾಸಿ ಬಿಬಿಎಂಪಿ ಗುತ್ತಿಗೆದಾರ ವೆಂಕಟೇಶ್, ಹೊಂಗಸಂದ್ರದ ನಿವಾಸಿ ದಯಾನಂದ್ ಬಂಧಿತ ಆರೋಪಿಗಳು.
ಮೊದಲಿಗೆ 35 ಲಕ್ಷ ನಿಷೇಧಿತ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ 1 ಸಾವಿರ ಹಾಗೂ 500 ಮುಖಬೆಲೆಯ 85 ಲಕ್ಷ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾಸರಗೋಡಿನಲ್ಲಿ ಬಾಕಿ ಹಣ ಇದೆ ಎಂದು ಆರೋಪಿಗಳ ಹೇಳಿಕೆ ಆಧರಿಸಿ ಕಾಸರಗೋಡಿಗೆ ಹೋದಾಗ ಅಲ್ಲಿ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಅಲ್ಲದೇ 16 ಮೂಟೆ ಪೇಪರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಯಾರು ಹಳೇ ನೋಟು ಪಡೆದು, ಹೊಸ ನೋಟು ಕೊಡ್ತಾರೋ ಅಂತವರಿಗೆ ಆರೋಪಿಗಳು ಗಾಳ ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.