ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ನಕಲಿ ಗುರುತಿನ ಚೀಟಿಯನ್ನು ರದ್ದು ಮಾಡಲು ಕಾರ್ಮಿಕ ಇಲಾಖೆ ಅಭಿಯಾನ ಆರಂಭಿಸಿದ್ದು, ಅಭಿಯಾನಕ್ಕೆ ಕಟ್ಟಡ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಅವರು, ರಾಜ್ಯದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನರು ನಕಲಿ ದಾಖಲಾತಿಗಳನ್ನು ನೀಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ ನೊಂದಾಯಿಸಿಕೊಂಡಿರುವುದುದ್ದಾರೆ. ಅಂತಹ ನಕಲಿ ಫಲಾನುಭವಿ ಕಾರ್ಡುದಾರರ ವಿರುದ್ಧ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆ ಜನವರಿ 25 ರಿಂದ ಫೆಬ್ರವರಿ 25 ರವರೆಗೆ ರದ್ದತಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನಕ್ಕೆ ಇಲಾಖೆಯ ಅಧಿಕಾರಿಗಳ ಜತೆ ಕೈ ಜೋಡಿಸಿ ರಾಜ್ಯಾದ್ಯಂತ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದ್ದಾರೆ.
ಇದನ್ನು ಓದಿ: ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದ ನಕಲಿ ಫಲಾನುಭವಿಗಳ ಗುರುತಿನ ಚೀಟಿ ರದ್ದತಿಗೆ ಅಭಿಯಾನ; ಕಾರ್ಮಿಕ ಇಲಾಖೆ
ಮಂಡಳಿಯಿಂದ ನೀಡಲಾಗುವ ಶೈಕ್ಷಣಿಕ, ಮದುವೆ, ಹೆರಿಗೆ, ವೈದ್ಯಕೀಯ, ಅಂತ್ಯಸಂಸ್ಕಾರ, ಪಿಂಚಣಿ ಹಾಗೂ ಇತರೆ ಧನ ಸಹಾಯ ಸೌಲಭ್ಯಗಳನ್ನು ಸಾವಿರಾರು ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ಗುರುತಿನ ಚೀಟಿ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ ಇದರ ವಿರುದ್ದ ಒಂದು ಅಭಿಯಾನ ನಡೆಸಿ ಎಲ್ಲ ನಕಲಿ ಕಾರ್ಡುಗಳನ್ನು ರದ್ದು ಮಾಡಲು ಕ್ರಮವಹಿಸಬೇಕು ಎಂಬುದು ನಮ್ಮ ಸಂಘಟನೆಯ ಆಗ್ರಹವಾಗಿತ್ತು ಎಂದಿದ್ದಾರೆ.
ಕಟ್ಟಡ ಕಾರ್ಮಿಕರಲ್ಲದ ಫಲಾನುಭವಿಗಳು ತಮ್ಮ ಸ್ವ-ಇಚ್ಛೆಯಿಂದ ಮಂಡಳಿ/ಕಚೇರಿಗೆ ಬಂದು ಗುರುತಿನ ಚೀಟಿಗಳನ್ನು ಸಲ್ಲಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಮಂಡಳಿಯು ನಿಯಮನುಸಾರ ಪರಿಶೀಲನೆ ನಡೆಸಿ ಅಂಥವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎನ್ನುವ ಅಭಿಯಾನವನ್ನು ಮಂಡಳಿ ಆರಂಭಿಸಿರುವುದು ಸ್ವಾಗತಾರ್ಹವಾಗಿದೆ ಕೆ.ಮಹಾಂತೇಶ್ ಎಂದು ತಿಳಿಸಿದರು.
ಇದನ್ನು ಓದಿ: ಕಟ್ಟಡ ಕಾರ್ಮಿಕರ ನಿಧಿ ದೋಚಲು ಸಚಿವರು-ಶಾಸಕರ ಹೊಂಚು: ಬಾಲಕೃಷ್ಣ ಶೆಟ್ಟಿ
ಬೆಂಗಳೂರು ಮಹಾನಗರ ಸೇರಿ ರಾಜ್ಯಾದ್ಯಂತ ಈ ನಕಲಿ ನೋಂದಣಿ ಹಾವಳಿ ವ್ಯಾಪಕವಾಗಿ ನಡೆದಿದೆ ವಿವಿಧ ರಾಜಕೀಯ ಪಕ್ಷದ ಏಜೆಂಟರು, ವ್ಯಕ್ತಿಗತ ಸಂಘಗಳು, ಕಾರ್ಮಿಕ ಇಲಾಖಾ ಸಿಬ್ಬಂದಿಗಳು ಈ ನಕಲಿ ನೊಂದಣಿ ಜಾಲದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ಚುನಾವಣೆಗಳು ಸಮೀಪಿಸುವಾಗ ಇದು ಮತ್ತಷ್ಟು ವ್ಯಾಪಕವಾಗಿ ನಡೆಯುತ್ತಿದೆ. ಇದರ ವಿರುದ್ದ ವ್ಯಾಪಕವಾದ ಪ್ರಚಾರ ನಡೆಸಿ ನೈಜ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಮಾತ್ರವೇ ಸಂಘಟಿತರಾಗಿ ಪ್ರಯೋಜನ ಪಡೆಯುವಂತಹ ವಾತವರಣ ನಿರ್ಮಿಸುವ ಕೆಲಸದಲ್ಲಿ ಫೆಡರೇಶನ್ ಈಗಾಗಲೇ ತೊಡಗಿಸಿಕೊಂಡಿದೆ ಎಂದರು.
ಮಂಡಳಿ ಈ ಅಭಿಯಾನಕ್ಕೆ ನೈಜ ಕಟ್ಟಡ ಕಾರ್ಮಿಕರನ್ನು ಸಂಘಟಿಸಿ ಅವರ ಬದುಕಿನ ಸಂಕಷ್ಟಗಳ ಪರಿಹಾರಕ್ಕಾಗಿ ಮತ್ತು ಕಲ್ಯಾಣ ಮಂಢಳಿ ರಕ್ಷಣೆ, ನಿಧಿ ದುರುಪಯೋಗದ ವಿರುದ್ದ ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಎಲ್ಲ ಸಂಘಟನೆಗಳು ಕೈ ಜೋಡಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಮನವಿ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ