ನಕಲಿ ಜಾತಿ ಪ್ರಮಾಣ ಪತ್ರಗಳ ವಂಚಕರನ್ನು ರಕ್ಷಿಸುತ್ತಿದೆಯೆ ಸರ್ಕಾರ

ಎಸ್.ವೈ. ಗುರುಶಾಂತ್

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಸರಮಾಲೆಗೆ ಕೊನೆಯಿಲ್ಲ ಎನಿಸುತ್ತದೆ. ಒಂದರ ನಂತರ ಮತ್ತೊಂದು ಹಗರಣಗಳು ಹೊರಬರುತ್ತಲೇ ಇವೆ. ಪಿ.ಎಸ್.ಐ. ಪರೀಕ್ಷಾ ಹಗರಣದ ತನಿಖೆ ಸಾಗುತ್ತಿರುವಂತೆ ಊಹೆಗೂ ಮೀರಿ ಅನೇಕ ಒಳಸುಳಿಗಳು ತೆರೆದುಕೊಳ್ಳುತ್ತಿವೆ. ಇದರ ಸೂತ್ರಧಾರಿಗಳು ಬಿಜೆಪಿಯ ಪ್ರಮುಖ ನಾಯಕರು ಮತ್ತು ಇತರೆ ಪಕ್ಷಗಳ ಹಲವರು, ಉನ್ನತ ಅಧಿಕಾರಿ ವಲಯ ಬಿಟ್ಟು ಬಿಡದಂತೆ ಬೆಸೆದುಕೊಂಡಿರುವುದು ಇಲ್ಲಿಯವರೆಗಿನ ತನಿಖೆಯಲ್ಲಿ ಕಂಡು ಬರುತ್ತಿದೆ. ಸಿಐಡಿ ತನಿಖೆಯೇನೋ ನಡೆಯುತ್ತಿದೆ. ಆದರೆ ಈ ಬಹುದೊಡ್ಡ ಹಗರಣದಲ್ಲಿ ತೊಡಗಿರುವವರ ಕೃತ್ಯಗಳು ಒಂದೊಂದಾಗಿ ಬಯಲಾಗುತ್ತಿರುವಂತೆ ಬೆಚ್ಚಿಬೀಳಿಸುವ ವಿವರಗಳು ಹೊರಬರುತ್ತಿವೆ. ಇಂತಹ ಬಾರಿ ಹಗರಣದ ತನಿಖೆಯನ್ನು ವಸ್ತುನಿಷ್ಠವಾಗಿ ನಡೆಸಲು ಈ ಸರ್ಕಾರ ಮುಂದಾಗುವುದೇ? ನಿಷ್ಠುರ ಕ್ರಮಗಳನ್ನು ಕೈಗೊಳ್ಳುವ ಇಚ್ಛಾಶಕ್ತಿ, ಕಾನೂನು, ಸತ್ಯನಿಷ್ಠತೆ ಇದೆಯೇ ಎನ್ನುವ ಅನುಮಾನದ ಪ್ರಶ್ನೆ ಸಹಜವಾಗಿಯೇ ಮೂಡಿ ಬರುತ್ತಿದೆ.

ಈ ವಾರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸರ್ಕಾರಕ್ಕೆ ಪತ್ರವನ್ನು ಕಳಿಸಿರುವುದು ವಂಚನೆಯ ಹಗರಣದ ಪ್ರಕರಣದಲ್ಲಿ ಭಾರಿ ಕುಳಗಳು ಭಾಗಿಯಾಗಿರುವ ಗಂಭೀರ ಶಂಕೆಯನ್ನು ಸಾರ್ವಜನಿಕರೆದುರು ತಂದಿದೆ. ಕರ್ನಾಟಕದಲ್ಲಿ ನಡೆದಿರುವ ನಕಲಿ ಜಾತಿ ಪ್ರಮಾಣ ಪತ್ರದ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವಂತೆ ಈ ಅಧಿಕಾರಿಯನ್ನು ಸರ್ಕಾರ ಇದ್ದಕ್ಕಿದ್ದಂತೆ ವರ್ಗಾವಣೆ ಆದೇಶ ಹೊರಡಿಸಿದುದರ ಗುಟ್ಟೇನು? ಇದು ರವೀಂದ್ರನಾಥ್ ರವರು ರಾಜೀನಾಮೆ ಸಲ್ಲಿಸುತ್ತಿರುವುದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗೃಹ ಇಲಾಖೆಯ ಸಲಹೆಗಾರರೂ ಮತ್ತು ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತಗಳ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ‘ಕೆಂಪಯ್ಯ ಐ.ಪಿ.ಎಸ್.’ ನವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಐಪಿಎಸ್ ಹುದ್ದೆಗೆ ಏರಿದ್ದಾರೆಂಬ ಆರೋಪದ ತನಿಖೆಗೆ ಸಂಬಂಧಿಸಿ ನೋಟಿಸ್ ಜಾರಿಯಾದ ಕೂಡಲೇ ಸೂಕ್ತ ಕಾರಣವಿಲ್ಲದೇ ರವೀಂದ್ರನಾಥ್ ರವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರನ್ನು ಕರ್ನಾಟಕ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ಕ್ರಮ ಸಹಜವಾಗಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವಂತಹದ್ದು.

1097 ಮಂದಿ ವಿರುದ್ಧ ಪರಿಶಿಷ್ಟ ಜಾತಿ-ಎಸ್‌.ಸಿ. ಪರಿಶಿಷ್ಟ ಪಂಗಡ-ಎಸ್.ಟಿ. ನಕಲಿ ಜಾತಿ ಪ್ರಮಾಣ ಪತ್ರವನ್ನು ಅಕ್ರಮವಾಗಿ ಪಡೆದಿರುವುದರ ಆರೋಪದಲ್ಲಿ ಪ್ರಕರಣ ದಾಖಲಿಸಿ ಎಫ್.ಐ.ಆರ್. ಹಾಕಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕ್ರಮಕೈಗೊಂಡಿದೆ. ರಾಜ್ಯವ್ಯಾಪಿ ಇಂತಹ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ನೀಡಿದ ಕೃತ್ಯಗಳು ವಿವಿಧ ಇಲಾಖೆಗಳಲ್ಲಿ ನಡೆದಿದೆ. ಇಂತಹ ಸುಳ್ಳು ಪ್ರಮಾಣಪತ್ರ ನೀಡಿದ 111 ತಹಸೀಲ್ದಾರರು, 108 ಕಂದಾಯ ನಿರೀಕ್ಷಕರು, 107 ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿಗಳ ಮೇಲೆ ಎಫ್.ಐ.ಆರ್. ದಾಖಲಾಗಿದೆ. 165 ಪ್ರಕರಣಗಳಲ್ಲಿ ಶಿಸ್ತು ಕ್ರಮಕೈಗೊಳ್ಳಲು ಸೂಚನೆ ಹೋಗಿದೆ.

ವಿಶೇಷವೆಂದರೆ ಸದಾಕಾಲ ಧರ್ಮ, ಸಂಸ್ಕೃತಿ, ಸಂಘಪರಿವಾರದ ದೇಶಭಕ್ತಿಯ ಬಗ್ಗೆ ಕೊಂಡಾಡಿ ತನ್ನನ್ನು ಟೀಕಿಸಿದ ಎಲ್ಲರ ಮೇಲೂ ಹರಿಹಾಯುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಮೇಲೂ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ ಆರೋಪ ಬಂದಿದೆ. ರೇಣುಕಾಚಾರ್ಯ ಅವರ ಮಗಳು ವೀರಶೈವ ಲಿಂಗಾಯತ ಆಗಿದ್ದು ‘ಬೇಡ ಜಂಗಮ’ ಎನ್ನುವ ನಕಲಿ ಜಾತಿ ಪ್ರಮಾಣಪತ್ರವನ್ನು ಪಡೆದ ಬಗ್ಗೆ ಮೊಕದ್ದಮೆ ದಾಖಲಾಗಿದೆ. 2012 ನವೆಂಬರ್ 17ಕ್ಕೆ ಬೆಂಗಳೂರು ಉತ್ತರ ಜಿಲ್ಲೆಯ ತಹಸಿಲ್ದಾರ್ ಈ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಇವರ ಮೇಲೆಯೂ ಕಾನೂನು ಪ್ರಕ್ರಿಯೆ ನಡೆದಿದೆ. ಈ ಹಗರಣ ಹೊರಬರುತ್ತಿದ್ದಂತೆ ರೇಣುಕಾಚಾರ್ಯ ಅವರು ತನಗೂ ಇದಕ್ಕೂ ಸಂಬಂಧವಿಲ್ಲ, ಅದೇನಿದ್ದರೂ ತಮ್ಮ ಸಹೋದರ ಇದನ್ಮು ಕೊಡಿಸಿದ್ದಾರೆ. ತನಗೂ ಆತನಿಗೂ ಈಗ ಸಂಬಂಧಗಳಿಲ್ಲ ಎಂದು ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ತಮ್ಮದೇ ಮಗಳು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದರಿಂದ ನುಣುಚಿ ಕೊಳ್ಳುವುದು ಹೇಗೆ ಸಾಧ್ಯ? ‘ನನ್ನ ಬಗ್ಗೆ ಬೇಕಾದರೆ ಮಾತನಾಡಲಿ. ಆದರೆ ಮಗಳ ಬಗ್ಗೆ ಯಾರಾದರೂ ಮಾತನಾಡಿದರೆ ತಾನು ಸಹಿಸುವುದಿಲ್ಲ’ ಎಂದು ಗರ್ಜಿಸುವ ರೇಣುಕಾಚಾರ್ಯ ತನ್ನ ಮಗಳ ಈ ಪ್ರಮಾಣ ಪತ್ರ ಮತ್ತು ಸರ್ಕಾರಿ ಸೌಲಭ್ಯಗಳ ಪಡೆದಿರುವುದು ತಮ್ಮ ಗಮನಕ್ಕೆ ಬರದೇ ಹೋಗಿದೆ ಎನ್ನುವುದು ಯಾರಾದರೂ ನಂಬಲು ಸಾಧ್ಯವಿದೆಯೇ? ಇದೇ ಖೊಟ್ಟಿ ಪ್ರಮಾಣಪತ್ರ ಹಿಡಿದೇ ಪಡೆದಿರುವ ಉನ್ನತ ಶಿಕ್ಷಣದ ಸರ್ಕಾರದ ಸೌಲಭ್ಯಗಳನ್ನು ಲಪಟಾಯಿಸಿರುವುದರ ಬಗ್ಗೆ ಏನೆನ್ನುತ್ತಾರೆ? ಈ ಜಾತಿ ಪ್ರಮಾಣಪತ್ರ ಎಲ್ಲದಕ್ಕೂ ಬಳಕೆಯಾಗಿರುವುದು ರೇಣುಕಾಚಾರ್ಯರ ವಂಚನೆಯ ಕೃತ್ಯವನ್ನು ಬಯಲಾಗಿಸಿದೆ.

ಈ ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವ ಮತ್ತು ನೀಡುತ್ತಿರುವ ಜಾಲ ಬಹುದೊಡ್ಡದಾಗಿದೆ. ನಿಜಕ್ಕೂ ಅತ್ಯಂತ ಶೋಷಿತ, ದಮನಿತ ವಿಭಾಗಗಳಾದ ಎಸ್.ಸಿ. ಮತ್ತು ಎಸ್.ಟಿ. ವಿಭಾಗಗಳ ಅಭಿವೃದ್ಧಿಗೆ ರೂಪಿಸಲಾದ ಕನಿಷ್ಠ ಯೋಜನೆಗಳು ಆ ವಿಭಾಗಕ್ಕೆ ಸಿಕ್ಕದಂತೆ ಬಾಚಿಕೊಳ್ಳುವ ವಂಚಕತನ ಖಂಡನೀಯ. ಇದು ಅಧಿಕಾರಸ್ಥ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿ ವಲಯದ ಶಾಮೀಲು ಇಲ್ಲದೆ ನಡೆಯಲು ಅಸಾಧ್ಯ ಜೊತೆಗೆ ಇಂತಹ ನಕಲಿ ಪ್ರಮಾಣಪತ್ರಗಳನ್ನು ಪಡೆಯಲು ವ್ಯಾಪಕವಾಗಿ ಹಣದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಇದ್ದೇ ಇರುತ್ತದೆ. ಶೋಷಿತ ಸಮುದಾಯಗಳ ವಿರುದ್ಧದ ಅಸಹನೆ ಮತ್ತು ಜಾತಿ ತಾರತಮ್ಯದ ದ್ವೇಷದ ಮನೋಭಾವವೂ ಇಲ್ಲಿ ಎದ್ದು ಕಾಣುತ್ತದೆ. ಈಗಲೂ ಕರ್ನಾಟಕದಲ್ಲಿ ಅನೇಕ ಕಡೆಗಳಲ್ಲಿ ಇಂತಹ ವಿವಿಧ ವಂಚನೆಯ ಪ್ರಕರಣಗಳು ನಡೆಯುತ್ತಿವೆ. ಬೀದರ್ ಮತ್ತು ಗುಲ್ಬರ್ಗ ಪ್ರದೇಶದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಗೊಂಡ ಹೆಸರಿನ ಎಸ್.ಟಿ. ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗುತ್ತಿರುವುದು ಇದ್ದಕ್ಕಿದ್ದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಹೆಚ್ಚಿರುವುದು ನಿಜಕ್ಕೂ ಬೆಚ್ಚಿಬೀಳಿಸುವ ಒಂದು ಸಂಗತಿಯಾಗಿದೆ. ಇಂತಹ ಪ್ರಕರಣ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಹೆಚ್ಚಿದೆ ಎನ್ನುವುದು ಕೂಡ ಗಮನಾರ್ಹ. ಒಂದಿಷ್ಟು ಆರ್ಥಿಕವಾಗಿ ಸಾಮಾಜಿಕ ಮತ್ತು ರಾಜಕೀಯವಾಗಿ ಮುಂದುವರೆದಿರುವ ಕೆಲವು ಶಕ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದಮನಿತರ ಅನ್ನಕ್ಕೆ, ಕಲಿಯುವ, ದುಡಿಯುವ ಅವಕಾಶಗಳಿಗೆ ಕೈಹಾಕಿ ಬಾಚಿ ಕೊಳ್ಳುತ್ತಿರುವುದು ಸಮುದಾಯಗಳಿಗೆ ಬಗೆಯುವ ದ್ರೋಹವಾಗಿದೆ. ವಿಚಿತ್ರವೆಂದರೆ ಇಂತಹ ವಂಚಕ ಪ್ರಕರಣಗಳನ್ನು ಆಳವಾದ ತನಿಖೆಗೆ ಒಳಪಡಿಸಿ ನಿಷ್ಠುರ ಕ್ರಮ ಜರುಗಿಸಿ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸಬೇಕಾದ ಸರ್ಕಾರವೇ ಇದೀಗ ಅಂತಹ ವಂಚನೆಯ ಜಾಲವನ್ನು ಹೊರಗೆಳೆದ ಉನ್ನತ ಅಧಿಕಾರಿಗಳ ಮೇಲೆ ಸೇಡಿನ ಕ್ರಮವನ್ನು ಕೈಗೊಳ್ಳುತ್ತಿದೆ. ಹೀಗೆ ಈ ಸರ್ಕಾರದ ಪ್ರತಿ ಕ್ರಮಗಳು ಅದು ಯಾರ ಪರ ಎನ್ನುವುದನ್ನು ಸಾರಿ ಹೇಳುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಪರವೆಂದು ಪೋಸ್ ಕೊಡುವ ಮುಖ್ಯಮಂತ್ರಿಗಳು, ಬಿಜೆಪಿಯ ನಾಯಕರು, ಈ ಸಮುದಾಯಗಳಿಂದ ಹೆಚ್ಚಿನ ಶಾಸಕರನ್ನು ಪಡೆದಿರುವ ಬಿಜೆಪಿ ವಾಸ್ತವದಲ್ಲಿ ಈ ಸಮುದಾಯಗಳಿಗೆ ಏನು ಮಾಡುತ್ತಿದೆ? ಈ ವಿಭಾಗಗಳ ಶಾಸಕರು ಸಚಿವರು ಏನು ಮಾಡುತ್ತಿದ್ದಾರೆ? ಅಧಿಕಾರದ ಎಂಜಲಿಗೆ ಹಪಾಹಪಿಸುವ ಇಂತಹವರು ತಾವು ಪ್ರತಿನಿಧಿಸುವ ಸಮುದಾಯಗಳಿಗೆ ಏನು ಮಾಡುತ್ತಿದ್ದಾರೆ? ಹೇಳಿ ಕೇಳಿ ಚಾತುರ್ವರ್ಣದ ಜಾತಿವ್ಯವಸ್ಥೆಯನ್ನು ಪ್ರತಿಪಾದಿಸುವ ಬಿಜೆಪಿ ಕಾರ್ಯಾಚರಣೆಯಲ್ಲಿಯೂ ಅದನ್ನೇ ಜಾರಿಗೊಳಿಸುತ್ತಿರುವುದು ಪ್ರತಿಹಂತದಲ್ಲೂ ನಿಚ್ಚಳವಾಗಿ ಕಾಣುತ್ತಿದೆ.

ಮುಖ್ಯಮಂತ್ರಿಗಳು ನಕಲಿ ಜಾತಿ ಪ್ರಮಾಣ ಪತ್ರ ನೀಡಿಕೆಯ ಈ ವಂಚಕ ಎಲ್ಲ ಪ್ರಕರಣಗಳನ್ನು ಆಳವಾದ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ಮೇಲೆ ನಿಷ್ಠುರವಾದ ಕಠಿಣ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ದಿಢೀರನೇ ವರ್ಗಾವಣೆ ಮಾಡಿರುವುದನ್ನು ರದ್ದುಗೊಳಿಸಬೇಕು. ಮತ್ತು ಈ ಪ್ರಕರಣ ತನಿಖೆ ಮುಂದುವರಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಎಲ್ಲಾ ಹಗರಣಗಳ ಕಪ್ಪು ಮಸಿ ಬಸವರಾಜ ಬೊಮ್ಮಾಯಿ ಅವರನ್ನು ಮೆತ್ತಿಕೊಳ್ಳುತ್ತದೆ ಎನ್ನುವುದನ್ನು ಮರೆಯಬಾರದು.

Donate Janashakthi Media

Leave a Reply

Your email address will not be published. Required fields are marked *