ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ನಕಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ

ಲಖನೌ: ಉತ್ತರ ಪ್ರದೇಶ ರಾಜ್ಯದಲ್ಲಿರುವ ಎತವಾ ಜಿಲ್ಲೆಯ ತಾಖಾ ತಾಲೂಕಿನ ಆರೋಗ್ಯ ಕೇಂದ್ರದ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಷಾ, ಲೋಕಸಭಾಧ್ಯಕ್ಷ​ ಓಂ ಬಿರ್ಲಾ, ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯುಷ್​ ಗೋಯೆಲ್​ ಹೆಸರಿನಲ್ಲಿ ಕೋವಿಡ್ ಲಸಿಕಾ​ ಪ್ರಮಾಣ ಪತ್ರಗಳನ್ನು ನೀಡಿದ್ದು, ಅಲ್ಲಿನ ಸರ್ಕಾರವು ತನಿಖೆಗೆ ಆದೇಶಿಸಿದೆ.

ಈ ಪ್ರಮಾಣ ಪತ್ರಗಳು ನಕಲಿ ಎಂದು ಹೇಳಿರುವ ಅಧಿಕಾರಿಗಳು ಇದರ ಹಿಂದೆ ಏನೋ ದೊಡ್ಡ ಪಿತೂರಿ ಇರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ನಕಲಿ ಎನ್ನಲಾದ ಪ್ರಮಾಣ ಪತ್ರದಲ್ಲಿ ಅಮಿತ್​ ಷಾ ವಯಸ್ಸನ್ನು 33 ಎಂದು ಉಲ್ಲೇಖಿಸಲಾಗಿದೆ. ನಿತಿನ್​ ಗಡ್ಕರಿ 30, ಪಿಯೂಷ್​ ಗೋಯೆಲ್​ 37 ಮತ್ತು ಓಂ ಬಿರ್ಲಾ 26 ವರ್ಷ ಎಂದು ಉಲ್ಲೇಖಿಸಲಾಗಿದೆ. ಇವರು ಡಿಸೆಂಬರ್ 12ರಂದು ಎತವಾದ ಆರೋಗ್ಯ ಕೇಂದ್ರದಲ್ಲಿ ಕೋವಿಡ್​ ಲಸಿಕೆಯ ಮೊದಲ ಡೋಸ್​ ಅನ್ನು ಪಡೆದುಕೊಂಡಿದ್ದಾರೆ ಎಂದು ಬರೆಯಲಾಗಿದೆ ಮತ್ತು 2022ರ ಮಾರ್ಚ್​ 5 ಮತ್ತು 2022ರ ಏಪ್ರಿಲ್​ 3ರ ನಡುವೆ ಎರಡನೇ ಡೋಸ್​‌ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.

ಈ ಬಗ್ಗೆ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ನಮ್ಮ ಲಾಗಿನ್​ ಐಡಿ ಡಿಸೆಂಬರ್‌ 12ರಂದು ಹ್ಯಾಕ್​ ಮಾಡಲಾಗಿತ್ತು ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.

ಅಲ್ಲದೆ, ಪ್ರಮಾಣಪತ್ರ ಬಹಿರಂಗಗೊಳ್ಳುತ್ತಿದ್ದಂತೆಯೇ, ಪ್ರಮಾಣಪತ್ರದಲ್ಲಿ ನಮೂದಿಸಲಾದ ಆರೋಗ್ಯ ಕೇಂದ್ರವು ಅವರುಗಳ ಹೆಸರಿನಲ್ಲಿ ನಾವು ಲಸಿಕೆ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಇದು ಪಿತೂರಿಯ ಪ್ರಕರಣವಾಗಿದೆ. ಎಂದಿರುವ ಸಿಎಂಒ ಡಾ ಭಗವಾನ್ ದಾಸ್ ಬಿರೋರಿಯಾ ಕೇಂದ್ರ ಸಚಿವರ ಹೆಸರನ್ನು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಲಾಗಿದೆ. ಈ ವಂಚನೆಯೂ ಶೀಘ್ರವೇ ಬಯಲಾಗಲಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *