ಚಳ್ಳಕೆರೆ : ಮತದಾರರ ನಕಲಿ ಗುರುತಿನ ಚೀಟಿ ಮುದ್ರಿಸುತ್ತಿದ್ದ ಇಲ್ಲಿನ ಶಾಂತಿನಗರದ ಮಂಜುನಾಥ ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 20 ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಂಡರು.
ನಕಲಿ ಗುರುತಿನ ಚೀಟಿ ಮುದ್ರಿಸುತ್ತಿದ್ದ ಜಾಲದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಎನ್.ರಘುಮೂರ್ತಿಯವರು ಡಿಸೆಂಬರ್ 10, ಸಂಜೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಗುರುತಿನ ಚೀಟಿಯನ್ನು ಮುದ್ರಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
‘ಪಟ್ಟಿಯಲ್ಲಿ ಇರುವ ಮತದಾರರಿಗೆ ಕಾರ್ಡ್ ವಿತರಿಸುವುದು ಚುನಾವಣಾ ಆಯೋಗದ ಕೆಲಸವಾಗಿದೆ. ಹೀಗಾಗಿ ಸಂಬಂಧಪಟ್ಟ ಏಜೆನ್ಸಿಗೆ ಗುರುತಿನ ಚೀಟಿ ಮುದ್ರಿಸಲು ಪರವಾನಗಿ ನೀಡುತ್ತದೆ. ಆಯೋಗಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಕೆಲವು ಅನಧಿಕೃತ ಕಂಪ್ಯೂಟರ್ ಸೆಂಟರ್‌ಗಳು, ಗುರುತಿನ ಚೀಟಿ ಮುದ್ರಿಸುವುದಲ್ಲದೆ ನಕಲಿ ಸಹಿ ಸೃಷ್ಟಿಸಿ ಚೀಟಿಯನ್ನು ದುಬಾರಿ ಹಣಕ್ಕೆ ಮಾರಾಟ ಮಾಡುವ ಮೂಲಕ ಮತದಾರರನ್ನು ವಂಚಿಸುತ್ತಿರುವುದುಗಮನಕ್ಕೆ ಬಂದಿತ್ತು. ಹಾಗಾಗಿ ಅನುಮಾನದ ಮೇಲೆ ದಾಳಿ ಮಾಡಿದಾಗಿ 20 ಕ್ಕೂ ಹೆಚ್ಚಿನ ಅಕ್ರಮ ಗುರುತಿನ ಚೀಟಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದಂತೆ ಅಂಗಡಿಯನ್ನು ಮುಚ್ಚಿಸಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’. ಇಂತಹ ಪ್ರಕರಣಗಳು ನಡೆಯದಂತೆ ಎಲ್ಲಾ ಸೈಬರ್ ಸೆಂಟರ್ ಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ರಘುಮೂರ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಾಳಿಯ ವೇಳೆ, ಶಿಕ್ಷಣ ಇಲಾಖೆ ತಾಲ್ಲೂಕು ಅಧಿಕಾರಿ ಕೆ.ಎಸ್.ಸುರೇಶ್, ಚುನಾವಣಾ ಶಾಖೆ ಓಬಳೇಶ್, ಕಂದಾಯ ಅಧಿಕಾರಿ ನಿಂಗೇಗೌಡ ಇದ್ದರು.