‘ನಕಲಿ ಸರ್ಟಿಫಿಕೇಟ್‌ ಶೂರʼ ನಿಮ್ಮ ಕಂಪನಿಗಳ ಕಥೆ ಬಿಚ್ಚಿಡಲೇ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಎಚ್‌ಡಿಕೆ ಕಿಡಿ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೆ ಆರೋಪಗಳನ್ನು ಮಾಡಿದ್ದು, ಈ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದಾರೆ.

ಮಲ್ಲೇಶ್ವರದಲ್ಲಿ ನೀವು ನಡೆಸಿರುವ ಕರ್ಮಕಾಂಡವನ್ನು ಬಿಚ್ಚಿಡುತ್ತೇನೆ. ಕಲಾಪ ನಡೆಸಿ ನೋಡಿ. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಎನ್ನುವಂತೆ ಮಲ್ಲೇಶ್ವರದಲ್ಲಿ ನಿಮ್ಮ ಸದಾರಮೆ ಶೋಕಿ ಎಂಥದ್ದು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಾಗಿದೆ. ನಾನು ಕಲಾಪ ನಡೆಸಿ ಎಂದಷ್ಟೇ ಕೇಳಿದೆ. ನಾನು ನಿಮ್ಮ ಹೆಸರೆತ್ತಲಿಲ್ಲ. ನಿಮಗೆ ಗೊತ್ತಿರಲಿ ಎಂದು ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಕಲಿ ಸರ್ಟಿಫಿಕೇಟ್‌ ರಾಜ ʼನಕಲಿ ಸರ್ಟಿಫಿಕೇಟ್‌ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ. ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ಯಾರು? ಎಲ್ಲಿ? ಹೇಗೆ? ಫೈಲ್ಯೂರ್ ಆಗಿದ್ದಾರೆ ಎನ್ನುವುದು ನನಗೂ ಗೊತ್ತು. ಕಳೆದ 3 ವರ್ಷದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಓತಲಾ ಹೊಡೆದವರು ಯಾರು? ಮುಕ್ಕಿಮುಕ್ಕಿ ಲೂಟಿ ಹೊಡೆದವರು ಯಾರು? ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯತೆ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ಆಪರೇಷನ್‌ ಕಮಲದಲ್ಲೂ ಕುಶಲತೆ? ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಾ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ ಎಂದಿದ್ದಾರೆ.

ಕರಾವಳಿ ಕೊಲೆಗಳು, ಮಳೆ-ನೆರೆ ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದೇನೆ, ನಿಜ. ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ? ಉನ್ನತ ಶಿಕ್ಷಣದ ಹುಳುಕು ಹೊರ ಬಂದಾವೆಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ʼಸರ್ಟಿಫಿಕೇಟ್‌ ಕೋರ್ಸ್‌ʼಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ; ಬಿಚ್ಚಲೇ ಎಂದು ಪ್ರಶ್ನಿಸಿದ್ದಾರೆ.

ಮೊನ್ನೆಯಷ್ಟೆ ಬಂದು ಹೋದ ಅಮಿತ್ ಶಾ ಯಾವ ಹೋಟೆಲಿನಲ್ಲಿ ಬಿಡಾರ ಹೂಡಿದ್ದರು? ನಿಮ್ಮ ನಾಯಕರೆಲ್ಲ ಬೆಂಗಳೂರಿಗೆ ಬಂದಾಗ ಕೃಷ್ಣಾ, ಅನುಗ್ರಹ ಅಥವಾ ಕಾವೇರಿ ಹಿಂದೆ ಗುಡಿಸಿಲಿನಲ್ಲಿ ಮಲಗುತ್ತಾರಾ? ಹೇಳಿಯಪ್ಪ ಅಶ್ವತ್ಥನಾರಾಯಣ? ಪ್ರಶ್ನಿಸಿದ ಕುಮಾರಸ್ವಾಮಿ, ನಿಮಗ್ಯಾಕೆ ಸಿಟ್ಟು ಬಂತೋ ನಾ ಕಾಣೆ. ಪಿಎಸ್ಐ ಅಕ್ರಮ, ಪ್ರಾಧ್ಯಾಪಕರ ನೇಮಕ ಅಕ್ರಮ, ಬಿಲ್ಲುಗಳ ಭಾಗವತ, ಮಹಾ ಡೀಲುಗಳ ಬಗ್ಗೆ ಚರ್ಚೆ ಮಾಡೋಣ, ನಾನು ತಯಾರಿದ್ದೇನೆ. ಕಲಾಪ ಕರಪಂಗನಾಮ ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಎಂದು ವ್ಯಂಗ್ಯವಾಡಿದರು.

ನಾನು ವಿರೋಧ ಪಕ್ಷದ ನಾಯಕ. ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಮೂಲಕ ಜಾರಿಕೊಳ್ಳುವ ಯತ್ನವೇಕೆ? ಕಲಾಪದಲ್ಲಿ ನನ್ನ ಮೌಲಿಕ ಪಾಲ್ಗೊಳ್ಳುವಿಕೆ ಎಷ್ಟು? ನಿಮ್ಮದೆಷ್ಟು? ತುಲನೆ ಮಾಡಿಕೊಳ್ಳಿ ಎಂದಿದ್ದಾರೆ.

ನನ್ನ ಸರಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಎಲ್ಲವೂ ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ, ಪಠ್ಯ ಪರಿಷ್ಕರಣೆ ಮಾಡಿದಿರಲ್ಲ. ದಾದಿಯರ ನಕಲಿ ಸರ್ಟಿಫಿಕೇಟ್‌ ಸೃಷ್ಟಿ ಹೇಗೆ? ಆಪರೇಷನ್‌ ಕಮಲ ಮಾಡುವುದು ಹೇಗೆ? ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದು ಹೇಗೆ? ಇದೆಲ್ಲವನ್ನು ಪಠ್ಯದಲ್ಲಿ ಸೇರಿಸಿದ್ದಿದ್ದರೆ ಮುಂದಿನ ಯುವಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು? ಅಲ್ಲವೇ ಆಪರೇಷನ್‌ ಅಶ್ವತ್ಥನಾರಾಯಣ ಎಂದು ಕೇಳಿದ್ದಾರೆ.

ಕಾಲು ಸುಂಕದ ರಸ್ತೆ ಕುಸಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕನಿಷ್ಠ ಪಾಪಪ್ರಜ್ಞೆಯೂ ಇಲ್ಲವೇ ನಿಮಗೆ? ಆಕಾಶದಲ್ಲಿ ಹಾರಾಡುವ ನಿಮಗೆ ಕಾಲು ಸುಂಕದ ಕಷ್ಟ ಅರ್ಥವಾದೀತೆ ಅಶ್ವತ್ಥನಾರಾಯಣ? ಮಳೆ ನೆರೆಯಿಂದ ಕರ್ನಾಟಕ ಕಣ್ಣೀರ ಕಡಲಾಗಿರುವುದು ಕಾಣುತ್ತಿಲ್ಲವೇ? ನಾನು ಎರಡನೇ ಸಲ ಸಿಎಂ ಆದಾಗ 800 ಕಾಲು ಸುಂಕ ಸೇತುವೆಗಳ ನಿರ್ಮಾಣಕ್ಕೆ ಆದೇಶಿಸಿದ್ದೆ. ಅವುಗಳಲ್ಲಿ ಎಷ್ಟು  ಪೂರ್ಣಗೊಳಿಸಿದ್ದೀರಿ? 3 ವರ್ಷಗಳ ನಿಮ್ಮ ಸರಕಾರದಲ್ಲಿ ಇಂಥಾ ಎಷ್ಟು ಸೇತುವೆ ನಿರ್ಮಿಸಿದ್ದೀರಿ? ಒಂದು ಮುಗ್ಧ ಸಾವು ನಿಮ್ಮ ಮನ ಕಲಕಲಿಲ್ಲವಲ್ಲಾ.. ನಾಚಿಕೆ ಆಗುವುದಿಲ್ಲವೇ ಉನ್ನತ ಶಿಕ್ಷಣ ಸಚಿವರೇ?

ಆಪರೇಷನ್‌ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮಖ್ಯಮಂತ್ರಿ ಆದಿರಿ, ಅದೂ ಹೋಗಿ ಕೊನೆಗೆ ಉನ್ನತ ಶಿಕ್ಷಣ ಮಂತ್ರಿಗಿರಿಯಷ್ಟೇ ಉಳೀತು? ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ನೀವು ʼಠಮ ಠಮ ಠಮʼ ಸದ್ದು ಮಾಡಲಿಲ್ಲ? ಆಗ ಎಲ್ಲಿದ್ಯಪ್ಪ ಅಶ್ವತ್ಥನಾರಾಯಣ?

ಜೆಡಿಎಸ್‌ ಕಂಪನಿ ಎನ್ನುತ್ತೀರಿ! ನಿಮ್ಮ ಕಂಪನಿಗಳ ಕಥೆ ಬಿಚ್ಚಬೇಕೆ? ಹೊರಗೆ ಸಾಚಾತನ, ಒಳಗೆ ಸೋಗಲಾಡಿತನ. ಎರಡು ತಲೆಯ ಕುಶಲತೆಯನ್ನು ಎಲ್ಲಿಂದ ಕಲಿತಿರಿ? ಸಂಘದಿಂದ ಬಂದ ಸಂಸ್ಕಾರವೇ? ಅಥವಾ ತಮ್ಮ ಹಿನ್ನೆಲೆಯೇ ಇದಾ? ನಿಮ್ಮ ನೈಜ ಹಿನ್ನೆಲೆಯ ಪುರಾಣ ಗೊತ್ತಿದ್ದವರಿಗೆ ಇದೇನು ಅಚ್ಚರಿಯಲ್ಲ ಬಿಡಿ ಅಶ್ವತ್ಥನಾರಾಯಣ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *