ಬೆಂಗಳೂರು: ದೇಶದ ಪ್ರತಿಶಿಷ್ಟ 29ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳ ಪಿ.ಎಚ್ಡಿ, ಪದವಿ, ಸ್ನಾತಕೋತ್ತರ ಶಿಕ್ಷಣದ ಅಂಕಪಟ್ಟಿಗಳನ್ನು ನಕಲುಗೊಳಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ, 1500ಕ್ಕೂ ಹೆಚ್ಚು ನಕಲಿ ಅಂಕಪಟ್ಟಿ, 80 ನಕಲಿ ಸೀಲ್, 30 ಹಾಲೋಗ್ರಾಂ ಸ್ಟಿಕ್ಕರ್, 8 ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪ್ರದೇಶದಲ್ಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಊತ್ತರ ಪ್ರದೇಶ ರಾಜ್ಯದ ಸಿ.ವಿ.ರಾಮನ್ ವಿವಿ, ದೆಹಲಿಯ ಸೆಕೆಂಡರಿ ಬೋರ್ಡ್, ಮೇಘಾಲಯದ ವಿಲಿಯಂ ಕ್ಯಾರಿ ಯೂನಿವರ್ಸಿಟಿ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಅಂಕಪಟ್ಟಿ ನಕಲು ಮಾಡಿ ಮಾರಾಟ ಮಾಡುತ್ತಿದ್ದು, ಸಿಸಿಬಿ ಅಪರಾಧ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ ಸಿಸಿಬಿ ಪೊಲೀಸರು ನಕಲಿ ಅಂಕಪಟ್ಟಿ ಮಾರಾಟಗಾರರ ಜಾಲವನ್ನು ಭೇದಿಸಿದ್ದಾರೆ. ವಿಶ್ವವಿದ್ಯಾಲಯಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳ ಹೆಸರಿನಲ್ಲಿ ಪಿ.ಎಚ್ಡಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಪದವಿಗಳ ನಕಲಿ ಪ್ರಮಾಣಪತ್ರಗಳನ್ನು ತಯಾರಿಕೆ ಕುರಿತ ಸುದ್ದಿ ತಿಳಿದ ನಂತರ ಕಾರ್ಯಾಚರಣೆ ನಡೆಸಲಾಗಿದೆ ಬೆಂಗಳೂರಿನ ವಿ.ಎಸ್.ಎಸ್. ಇನ್ಸಿಟ್ಯೂಟ್ ಮೇಲೆ ಸಿಸಿಬಿ ದಾಳಿ ನಡೆಸಿತ್ತು, ವ್ಯವಸ್ಥಿತ ರೀತಿಯಲ್ಲಿ ಶಾಲೆ, ಪದವಿ, ಪಿಎಚ್ಡಿ ಪದವಿ ಅಂಕಪಟ್ಟಿಗಳನ್ನು ಸಿದ್ದಪಡಿಸಿಕೊಡುವ ಜಾಲವನ್ನ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಸುಮಾರು ಹವಲು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 4 ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದರು.
ಮೆಡಿಕಲ್ ಹೊರತುಪಡಿಸಿ ಪಿಯುಸಿ ಇಂದ ಪಿಎಚ್ಡಿ ವರೆಗೆ ನಕಲಿ ಅಂಕಪಟ್ಟಿಗಳನ್ನು ನೀಡಲಾಗುತ್ತಿತ್ತು. ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಅವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ. ಬೇರೆ ರಾಜ್ಯದ ಕೆಲವು ವಿಶ್ವವಿದ್ಯಾಲಯದ ನೈಜ ಅಂಕಪಟ್ಟಿಗಳೂ ಸಿಕ್ಕಿವೆ. ಅವುಗಳನ್ನು ಪರಿಶೀಲನೆಗಾಗಿ ವಿಶ್ವವಿದ್ಯಾಲಯಗಳನ್ನು ಸಂರ್ಪಕಿಸಲಾಗುತ್ತಿದೆ ಎಂದಿದ್ದಾರೆ.
ಒಂದೊಂದು ಪ್ರಮಾಣಪತ್ರಕ್ಕೂ ಒಂದೊಂದು ದರವನ್ನು ನಿಗದಿಪಡಿಸಲಾಗಿತ್ತು. ಸುಮಾರು 5 ವರ್ಷಗಳಿಂದ ಈ ದಂಧೆಯಲ್ಲಿ ಆರೋಪಿಗಳು ತೊಡಗಿದ್ದಾರೆ. 1 ಲಕ್ಷದಿಂದ 15 ಲಕ್ಷದವರೆಗೂ ಮಾರಾಟ ಮಾಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ಪ್ರಮಾಣಪತ್ರಗಳನ್ನು, ಯಾರು ಯಾರಿಗೆ ನೀಡಿದ್ದಾರೆ ಎನ್ನುವ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ವಿ.ಎಸ್.ಎಸ್. ಅಂತರ್ಜಾಲದ ಮೂಲಕ ದೂರ ಶಿಕ್ಷಣ ನೀಡುವುದಾಗಿ ತಿಳಿಸಿ ಅದರ ಮೂಲಕವೂ ಸಾಕಷ್ಟು ಜನರಿಗೆ ನಕಲಿ ಅಂಕಪಟ್ಟಿಯನ್ನು ನೀಡಿರುವುದು ಕಂಡುಬಂದಿದೆ ಎಂದರು.