ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. “ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ” ಅಂತಾ ಮುಖ್ಯಮಂತ್ರಿ ಹೇಳಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ನೈತಿಕ ಪೊಲೀಸ್‌ಗಿರಿ, ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ” ಎಂದು ತಿಳಿಸಿದರು.
“ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ನೈತಿಕತೆ ಅನ್ನುವುದು ಸಮಾಜದಲ್ಲಿ ಬೇಕಲ್ವಾ? ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗುತ್ತಾ? ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದಕ್ಕೆ ಧಕ್ಕೆಯಾದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತದೆ” ಎಂದರು.
ಇತ್ತೀಚೆಗೆ ಮೂಡಬಿದಿರೆಯಲ್ಲಿ ಅನ್ಯಧರ್ಮದ ದಂಪತಿಗಳು ಇಬ್ಬರು ಯುವತಿರನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಡ್ಡಗಟ್ಟಿದ್ದ ಭಜರಂಗದಳದ ಕಾರ್ಯಕರ್ತರು, ದಂಪತಿ ಮತ್ತು ಯುವತಿಯರಿಗೆ ಅಗೌರವ ತರುವಂತೆ ವರ್ತನೆ ಮಾಡಿದ್ದರು. ಈ ಪ್ರಕರಣ ಸಂಬಂಧ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬ ಕಾರ್ಯಕರ್ತರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದರು.
ಆದರೆ, ಬಂಧನವಾದ 24 ಗಂಟೆಯೊಳಗೆ ಆರೋಪಿಗಳಿಗೆ ಜಾಮೀನು ಲಭ್ಯವಾಗಿದ್ದು, ಆರೋಪಿಗಳನ್ನು ಠಾಣೆಯಿಂದ ಬಿಡಿಸಿಕೊಂಡು ಬರಲು ಸ್ವತಃ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಹೋಗಿದ್ದರು. ಶಾಸಕರ ನಡೆಯ ಬಗ್ಗೆ ತೀವ್ರ ಟೀಕೆ ವ್ಯಕ್ಯವಾಗಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘಟನೆಯನ್ನು ಸಮರ್ಥಿಸುವ ಮೂಲಕ ನೈತಿಕ ಪೊಲೀಸ್‌ಗಿರಿಗೆ ಪರೋಕ್ಷವಾಗಿ ಬೆಂಬಲಿಸಿದ್ದಾರೆ.