ರಮೇಶ ಗುಲ್ವಾಡಿ
ಮಗುವನ್ನು ಹಾಗೇ ಗಟ್ಟಿಯಾಗಿ ಎದೆಗೊತ್ತಿಕೋ…
ಉಸಿರ ಬಿಸಿಗೆ ಬಾಡಲಿ
ಭಾವನೆಗಳು,
ಅದುಮಿಟ್ಟುಕೊಳುವುದನು ಕಲಿತುಕೊಳ್ಳಲಿ
ಈಗಲೇ…!
ಇಲ್ಲಿ ನಗುವುದನ್ನು ನಿಷೇಧಿಸಲಾಗಿದೆ …..!
ನಕ್ಕರೆ ಕಂಪಿಸುತ್ತದೆ ಸಿಂಹಾಸನ
ದಲ್ಲಿ ಕುಳಿತವರ ಎದೆ
ಸಕ್ಕರೆ ಲೇಪಿಸಿದ ಗುಳಿಗೆ
ಯಂತೆ ಆಳುವವರ ಆಶ್ವಾಸನೆಗಳ ಕಥೆ
ಖಚಿತವಿದೆ ಬೀಳುವುದು
ನಗುವಿಗೂ ತೆರಿಗೆ-ಸಜೆ !
ಇಲ್ಲಿ ನಗುವುದನ್ನು ನಿಷೇಧಿಸಲಾಗಿದೆ…..!
ನಾಡ ತುಂಬಿದ ಗುಸುಗುಸಿಗೆ
ಬೆವೆತು
ಕಸಿವಿಸಿ ದೊರೆಗೆ
ಸ್ವಂತ ನೆರಳಿಗೂ ಬೆದರಿ
ಅವಿತು
ಹಸಿ ಹಸೀ ಸುಲಿಗೆ
ಗೂಟ ಬಡಿದಂತೆ ನಿರಂಕುಶ ಪಟ್ಟಭದ್ರ
ಬುಡದ ಗೆದ್ದಲ ಕಂಡೂ ಬಾಯ್ತೆರೆಯುವಂತಿಲ್ಲ !
ಇಲ್ಲಿ ನಗುವುದನ್ನು ನಿಷೇಧಿಸಲಾಗಿದೆ…..!
ಗೋ ಮೂತ್ರದಲಿ ಅದ್ದಿ ತೊಳೆದರೂ
ಹೊಳೆಯದ ಕೊಳಕು ಹಲ್ಲು ಅರಸನದು !
ಬಾಬಾನ ಟೂಥ್ ಪೇಸ್ಟು ಭಜಕರ ಬ್ರಶ್ಶೂ
ಒಂದಿನಿತೂ ಫಲವಿಲ್ಲ ವೇಸ್ಟೂ,
ಸ್ವಚ್ಛತಾ ಆಂದೋಲನ ಬರೀ ಗಂಟಲ ಮಾತು
ಬಾಯ್ತೆರೆದರೆ ಗಬ್ಬು ವಾಸನೆ
ಹಲ್ಲ ನಡುವೆಲ್ಲಾ ತೂತು
ಕನ್ನಡಿಯೆದುರಿನ ಮುಖಕೆ ಹೇಸಿಕೊಂಡವನಲ್ಲಿ
ಮೀಸೆ-ದಾಡಿಯಡಿಯಲ್ಲೇ ಅಡಗಿ ಆದೇಶಿಸಿದ್ದಾನೆ…
ಇಲ್ಲಿ ನಗುವುದನ್ನು ನಿಷೇಧಿಸಲಾಗಿದೆ…..!
ಪ್ರತಿಭಟನೆಯ ಬಿಸಿಗೆ ಕರಗುವವನಲ್ಲ ಮಹಾರಾಜ ,
ಬರೆದಿಟ್ಟುಕೊಂಡಿದ್ದಾನಂತೆ ಎಲ್ಲರ ಹೆಸರ !
ತಿರುಗಿ ನಿಲ್ಲುವವರಿಗೆಲ್ಲಾ ಕಾದಿದೆ ನೋಡಿ
ತುಟಿ ಪಿಟಿಕ್ ಎಂದವರಿಗದೋ ಕೈಗೆ ಬೇಡಿ
ಯಾರದು ಕಿಸಕ್ ಎಂದವರು?
ಇದೆ ಸರ್ಚು ವಾರಂಟು
ಬಿಡಿಸಿಕೊಳ್ಳಲು ಕಾನೂನು ಕುಂಟು
ಇಲ್ಲಿ ನಗುವುದನ್ನು ನಿಷೇಧಿಸಲಾಗಿದೆ…..!