ʻಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಭಿಷೇಕ್ ರಾಮ್‌ದಾಸ್ ಹಾಗು ಶರಣ್ಯಾ ಶೆಟ್ಟಿ ನಟನೆಯ ‘ನಗುವಿನ ಹೂಗಳ ಮೇಲೆ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ ಅರಳಿರುವ ‘ಇರಲಿ ಬಿಡು ಈ ಜೀವ ನಿನಗಾಗಿ’ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ.
ಆಮ್ಲೆಟ್’, ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಬಹು ನಿರೀಕ್ಷಿತ ಚಿತ್ರ ‘ನಗುವಿನ ಹೂಗಳ ಮೇಲೆ’. ಅಭಿದಾಸ್, ಶರಣ್ಯಾ ಶೆಟ್ಟಿ ಮುಖ್ಯ ಭೂಮಿಕೆಯ ಈ ಚಿತ್ರ ಪ್ರೇಕ್ಷಕರೆದುರು ಬರಲು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಇದೀಗ ಸಿನಿಮಾ ತಂಡ ಚಿತ್ರದ ಮೊದಲ ಹಾಡನ್ನು ಜೀ ಮ್ಯೂಸಿಕ್ ನಲ್ಲಿ ಬಿಡುಗಡೆ ಮಾಡಿದೆ.
ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ ಅರಳಿರುವ ‘ಇರಲಿ ಬಿಡು ಈ ಜೀವ ನಿನಗಾಗಿ’ ಹಾಡಿಗೆ ತಜೇಂದರ್ ಸಿಂಗ್, ನಿಹಾರಿಕ ನಾಥ್ ದನಿಯಾಗಿದ್ದು, ಲವ್ ಪ್ರಾನ್ ಮೆಹತಾ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ. ಈ ಮೂಲಕ ಸಿನಿಮಾ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ. ಸೆನ್ಸಾರ್‌ಗೆ ರೆಡಿಯಾಗಿರುವ ಚಿತ್ರ ಏಪ್ರಿಲ್‌ನಲ್ಲಿ ಬೆಳ್ಳಿ ಪರದೆ ಮೇಲೆ ಬರಲಿದೆ.
ಇದನ್ನು ಓದಿ: ಲಂಡನ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಮುಗಿಸಿದ ʻನಗುವಿನ ಹೂಗಳ ಮೇಲೆʼ
ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್, ಶರಣ್ಯಾ ಶೆಟ್ಟಿ ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಒಳಗೊಂಡ ದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ. ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ.
ಟಾಲಿವುಡ್‌ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸ ಚಿತ್ರಕ್ಕಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ