ನಗೂ ನಿಲ್ಲಿಸಿದ ಖ್ಯಾತ ಹಾಸ್ಯ ನಟ ವಿವೇಕ

 ಚೆನ್ನೈ : ತೀವ್ರ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 59 ವರ್ಷದ ವಿವೇಕ್​ಗೆ ನಿನ್ನೆ ಹೃದಯ ನಾಳದಲ್ಲಿ ತೊಂದರೆ ಉಂಟಾಗಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 4.45ಕ್ಕೆ ವಿವೇಕ್ ಸಾವನ್ನಪ್ಪಿದ್ದಾರೆ. ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ವಿವೇಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಲಾಗಿತ್ತು.

ವಿವೇಕ್ ಅವರ ಹೃದಯನಾಳದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೃದಯಾಘಾತ ಉಂಟಾದ್ದರಿಂದ ನಿನ್ನೆ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದರಿಂದ ಅದರ ಅಡ್ಡ ಪರಿಣಾಮದಿಂದ ಹೃದಯಾಘಾತ ಉಂಟಾಗಿರಬಹುದು ಎಂಬ ಚರ್ಚೆಗಳೂ ನಡೆದಿದ್ದವು. ಆದರೆ, ವೈದ್ಯರು ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ವೆಂಟ್ರಿಕ್ಯುಲರ್ ಫೈಬ್ರಿಲೇಷನ್ ಎಂಬ ಹೃದಯ ಸಂಬಂಧಿ ತೊಂದರೆಗೀಡಾಗಿದ್ದ ನಟ ವಿವೇಕ್ ಅವರಿಗೆ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿದೆ ಎಂದು ನಿನ್ನೆ ಎಸ್​ಐಎಂಎಸ್ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ತಮಿಳು ಚಿತ್ರರಂಗದಲ್ಲಿ ಚಿನ್ನ ಕಲೈವಾನರ್ ಎಂದೇ ಖ್ಯಾತಿ ಗಳಿಸಿರುವ ವಿವೇಕ್ ರಜನಿಕಾಂತ್, ಅಜಿತ್ ಸೇರಿದಂತೆ ಬಹುತೇಕ ಎಲ್ಲ ಖ್ಯಾತ ನಟರ ಜೊತೆ ನಟಿಸಿದ್ದಾರೆ. ತಮ್ಮ ನೇರ ನುಡಿಯಿಂದ ಪ್ರಸಿದ್ಧರಾಗಿದ್ದ ವಿವೇಕ್ ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಚಿಂತನೆಗಳು ಮತ್ತು ಜೀವನಶೈಲಿಯಿಂದ ನಟ ವಿವೇಕ್ ಬಹಳ ಪ್ರಭಾವಿತರಾಗಿದ್ದರು.

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರೇ ವಿವೇಕ್​ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. 1980ರಲ್ಲಿ ಬಾಲಚಂದರ್ ಅವರ ಸಿನಿಮಾ ಮೂಲಕ ವಿವೇಕ್ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ವಿವೇಕ್ ಅವರಿಗೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ವಿವೇಕ್ ಅವರು ಕೊನೆಯ ಬಾರಿ ಧರಳ ಪ್ರಭು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ನಟ ವಿವೇಕ್ ಹಾಸ್ಯ ನಟ, ನಿರೂಪಕ, ಹಿನ್ನೆಲೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದರು. 2015ರಲ್ಲಿ ನಟ ವಿವೇಕ್ ಅವರ 13 ವರ್ಷದ ಮಗ ಬ್ರೈನ್ ಫೀವರ್​ನಿಂದ ಸಾವನ್ನಪ್ಪಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿದಿತ್ತು. ವಿವೇಕ್ ಅವರು ಹೆಂಡತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಗಣ್ಯರ ಕಂಬನಿ :  ವಿವೇಕ್ ಅವರ ಅನಿರೀಕ್ಷಿತ ನಿಧನಕ್ಕೆ ಚಿತ್ರರಂಗ ಮರುಗಿದೆ. ಸಹ ಕಲಾವಿದನ ಸಾವು ಅತೀವ ನೋವು ಉಂಟು ಮಾಡಿದ್ದು, ಹಲವು ಕಲಾವಿದರು ವಿವೇಕ್ ಅವರ ಜೊತೆಗಿನ ನೆನಪು ಮೆಲುಕು ಹಾಕಿದ್ದಾರೆ.

”ಇಷ್ಟು ಬೇಗ ಹೋದ ಗೆಳೆಯ..  ನಿನ್ನ ಆಲೋಚನೆಗಳನ್ನು ಮರಗಳಾಗಿ ನೆಟ್ಟಿದ್ದಕ್ಕೆ ಹಾಗು ನಿಮ್ಮ ಬುದ್ದಿ ಮತ್ತು ಹಾಸ್ಯದಿಂದ ನಮ್ಮನ್ನು ರಂಜಿಸಿದ್ದಕ್ಕೆ ಧನ್ಯವಾದಗಳು. ನಿನ್ನ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ಬಹುಭಾಷೆ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಹಿರಿಯ ನಟ ಸತ್ಯರಾಜ್ ”ನನ್ನ ಪ್ರೀತಿಯ ಸಹೋದರ ವಿವೇಕ್ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಸ್ವೀಕರಿಸುವುದು ಬಹಳ ಕಷ್ಟವಾಗಿದೆ. ಅವರ ಕುಟುಂಬ, ಅಭಿಮಾನಿಗಳು, ಸ್ನೇಹಿತರನ್ನು ಬಿಟ್ಟು ಹೋದರು. ಏನು ಮಾತಾನಾಡುವುದು ನನಗೆ ತಿಳಿದಿಲ್ಲ” ಎಂದು ಭಾವುಕರಾದರು. ತಮಿಳು ನಟ ಸೂರ್ಯ, ಕಾರ್ತಿ ಹಾಗೂ ಜ್ಯೋತಿಕಾ ಅವರು ವಿವೇಕ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *