ಮಹಾರಾಷ್ಟ್ರ: ನಾಗ್ಪುರ ಕಾರ್ಖಾನೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ನಿರ್ದೇಶಕ ಮತ್ತು ವ್ಯವಸ್ಥಾಪಕರನ್ನು ಬಂಧಿಸಲಾಗಿದೆ.
ಚಾಮುಂಡಿ ಎಕ್ಸ್‌ಪ್ಲೋಸಿವ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಜಯ್ ಖೇಮ್ಕಾ (49) ಮತ್ತು ಮ್ಯಾನೇಜರ್ ಸಾಗರ್ ದೇಶಮುಖ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ, ಸ್ಫೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಘಟನೆಯ ವೇಳೆ ಕಾರ್ಮಿಕರು ಕಾರ್ಖಾನೆಯ ಪ್ಯಾಕೇಜಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.
ನಿರ್ದೇಶಕ ಮತ್ತು ಮ್ಯಾನೇಜರ್ ಇಬ್ಬರನ್ನೂ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ನಾಗ್ಪುರದ ಹಿಂಗ್ನಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿನೋದ ಗೋಡ್ಬೋಲೆ ತಿಳಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಾಗ್ಪುರ ನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಧಮ್ನಾ ಗ್ರಾಮದಲ್ಲಿರುವ ಚಾಮುಂಡಿ ಎಕ್ಸ್‌ಪ್ಲೋಸಿವ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಳೆದ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಆದರೆ, ಚಿಕಿತ್ಸೆ ವೇಳೆ ಐವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಹಿಂಗ್ನಾ ಪೊಲೀಸ್ ಠಾಣೆ ಅಧಿಕಾರಿಗಳ ಪ್ರಕಾರ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ), 304 (ಎ) (ಯಾವುದೇ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯದಿಂದ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗುವುದು) ಮತ್ತು 338 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಮಧ್ಯಾಹ್ನ 3 ಗಂಟೆಗೆ ಘಟನೆಯ ಬಗ್ಗೆ ನಮಗೆ ತಿಳಿಯಿತು ಮತ್ತು ನಾನು ಸ್ವಲ್ಪ ಸಮಯದ ನಂತರ ಆಸ್ಪತ್ರೆಗೆ ಧಾವಿಸಿದೆ. ಕಂಪನಿ ಅಧಿಕಾರಿಗಳು ನನ್ನನ್ನು ಅಥವಾ ಇತರ ಗಾಯಗೊಂಡ ವ್ಯಕ್ತಿಗಳ ಸಂಬಂಧಿಕರನ್ನು ಸಂಪರ್ಕಿಸಿಲ್ಲ. ನನ್ನ ಪತಿಗೆ ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿವೆ ಎಂದು ಪ್ರಮೋದ್ ಚಾವ್ರೆ ಅವರ ಪತ್ನಿ ಮನೀಶಾ ಚಾವ್ರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಸಹಾಯ ನಿಧಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಮಹಾರಾಷ್ಟ್ರ ದೇವೇಂದ್ರ ಫಡ್ನವೀಸ್ ಗುರುವಾರ ಹೇಳಿದ್ದಾರೆ.