ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಕೋವಿಡ್- 19 ನಿಯಮವಳಿಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆದಿದ್ದು, ಬೆಂಗಳೂರಿನಲ್ಲಿ ಶಾಲೆಗಳನ್ನು ಆರಂಭಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ತಜ್ಞರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಮಾಹಿತಿ ನೀಡಿತು. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಕೊರೊನಾ ತೀವ್ರತೆ ಕಡಿಮೆ ಇರುವುದರಿಂದ ಶಾಲೆಗಳನ್ನ ಪುನರಾರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಕೋವಿಡ್ ನಿಯಮ ಪಾಲಿಸಿ ಶಾಲೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ. ಶಾಲೆ ಆರಂಭಕ್ಕೆ ನಿಯಮ ಪಾಲಿಸುವುದು ಕಡ್ಡಾಯ. ಶೇ.100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ರಾಜ್ಯದ ಇತರೆ ಶಾಲೆಗಳಿಗೆ ಇರುವ ಮಾರ್ಗಸೂಚಿಗಳು ಬೆಂಗಳೂರಿನ ಶಾಲೆಗಳಿಗೂ ಇರುತ್ತವೆ. ಯಾವುದಾದರೂ ವಿದ್ಯಾರ್ಥಿಗೆ ಪಾಸಿಟಿವ್ ಬಂದರೆ ಆ ತರಗತಿ ಮಾತ್ರ ಮುಚ್ಚುತ್ತದೆ. ತರಗತಿಯ ಎಲ್ಲಾ ಮಕ್ಕಳಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಆ ತರಗತಿ ಎಷ್ಟು ದಿನ ಮುಚ್ಚಬೇಕು ಎಂದು ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಳಿದಂತೆ ಶಾಲೆ ತೆರೆದಿರುತ್ತದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಶಾಲೆಗಳ ಆರಂಭದೊಂದಿಗೆ ಜನವರಿ 31ರಿಂದ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಹಿಂತೆಗೆದುಕೊಳ್ಳಲಾಗುವುದು. ಸಿನಿಮಾ ಮಂದಿರಗಳಲ್ಲಿ ಶೇಕಡ 50ರಷ್ಟು ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ, ಗೋವಾ, ಕೇರಳದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ನೆಗೆಟಿವ್ ವರದಿ ತರಬೇಕು. ಪಬ್, ರೆಸ್ಟೋರಂಟ್, ಹೋಟೆಲ್ಗಳಲ್ಲಿ ಶೇ.50ರಷ್ಟು ಭರ್ತಿಗೆ ಅವಕಾಶ ದೇವಸ್ಥಾನಗಳಲ್ಲಿ ಪೂಜೆಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ ನೀಡಲಾಗಿದೆ. ಮಂದಿರ, ಮಸೀದಿ, ಚರ್ಚ್ಗಳಲ್ಲಿ ಸೇವೆ ಪುನಾರಂಭ ಮಾಡಬಹುದು. ಆದರೆ ಧಾರ್ಮಿಕ ಸ್ಥಳಗಳಲ್ಲಿ 50 ಜನ ಮಾತ್ರ ಒಂದೇ ಬಾರಿ ದರ್ಶನ ಪಡೆಯಬಹುದು. ಜಾತ್ರೆ, ಮೆರವಣಿಗೆ, ಧರಣಿ, ಪ್ರತಿಭಟನೆ ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಜಿಮ್, ಈಜುಕೊಳದಲ್ಲಿ ಶೇ.50ರಷ್ಟು ಅವಕಾಶ ನೀಡಲಾಗಿದೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ಹಂಚಿಕೊಂಡರು.