ಮಂಡ್ಯ : ಗಣೇಶ ವಿಸರ್ಜನೆ ನೆಪದಲ್ಲಿ ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮು ಗಲಭೆ ಮತ್ತು ಆಸ್ತಿ ಪಾಸ್ತಿ ಹಾನಿಗೆ ಸಂಘ ಪರಿವಾರದ ಸಂಚು, ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಜೆಡಿಎಸ್ ಪಕ್ಷದೊಡನೆ ಬಿಜೆಪಿ ಮಾಡಿಕೊಂಡಿರುವ ಅವಕಾಶವಾದಿ ಮೈತ್ರಿಯನ್ನು ಸಂಘ ಪರಿವಾರ ದುರುಪಯೋಗ ಮಾಡಿಕೊಳ್ಳುತ್ತಿರುವುದೇ ಕಾರಣ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ತಿಳಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಇದೇ ಸೆಪ್ಟೆಂಬರ್ 17 ರಂದು ನಾಗಮಂಗಲ ಪಟ್ಟಣಕ್ಕೆ ಬೇಟಿ ನೀಡಿದ್ದ ಸಿಪಿಐಎಂ ಪಕ್ಷದ ನಿಯೋಗ ಸಂತ್ರಸ್ತರು ಮತ್ತು ಸಾರ್ವಜನಿಕರೊಡನೆ ಮಾತನಾಡಿದಾಗ ಅನೇಕ ಅಂಶಗಳು ಕಂಡು ಬಂದಿವೆ. ನಿಯೋಗದಲ್ಲಿ ತಾವು ಸೇರಿದಂತೆ ರಾಜ್ಯ ಸಮಿತಿ ಸದಸ್ಯ ಎಂ. ಪುಟ್ಟಮಾದು, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿ. ಕುಮಾರಿ, ಜಿಲ್ಲಾ ಸಮಿತಿ ಸದಸ್ಯರಾದ ಹನುಮೇಶ್, ಸುರೇಂದ್ರ ಕಾರ್ಮಿಕ ಮುಖಂಡರಾದ ರಮೇಶ್ ಇದ್ದರು ಎಂದು ತಿಳಿಸಿದರು.
ಸೆಪ್ಟೆಂಬರ್ 11 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣ ಹತ್ತಿ ಉರಿಯಿತು. ಗಣೇಶ ವಿಸರ್ಜನೆಯ ಮೆರವಣಿಗೆಯನ್ನು ಗಲಭೆಯಾಗಿ ಪರಿವರ್ತಿಸುವ ಮತ್ತು ಆ ಮೂಲಕ ಮಂಡ್ಯ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳುವ ಸಂಘ ಪರಿವಾರದ ಸಂಚಿಗೆ ನಾಗಮಂಗಲ ನಲುಗಿ ಹೋಗಿದೆ. ಗಲಭೆ ನಡೆದದ್ದು ಕೇವಲ ಒಂದೇ ದಿನ ಅದರಲ್ಲೂ ಕೆಲವೇ ಗಂಟೆಗಳೇ ಆದರೂ ಕಂದಾಯ ಇಲಾಖೆಯ ಅಂದಾಜಿನ ಪ್ರಕಾರ ಆದ ನಷ್ಟ ಸುಮಾರು 25 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಪಾಸ್ತಿ. ಸಣ್ಣ ಪುಟ್ಟ ಅಂಗಡಿ, ಮೆಕ್ಯಾನಿಕ್ ಶಾಪ್, ಟೈಲರಿಂಗ್ ಅಂಗಡಿ ಇಟ್ಟುಕೊಂಡು ಹೊಟ್ಟೆ ಹೊರೆಯುತಿದ್ದ ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ ಎಂದರು.
ನಾಗಮಂಗಲ ಪಟ್ಟಣದಿಂದ ಉತ್ತರಕ್ಕೆ ಅಂದರೆ ಬೆಳ್ಳೂರು ಕಡೆಗೆ ಎರಡು ಕಿಲೋಮೀಟರ್ ದೂರದಲ್ಲಿರುವ ಬದರಿಕೊಪ್ಪಲು ಗ್ರಾಮದ ಯುವಕರು ಎಂದಿನಂತೆ ಈ ವರ್ಷವೂ ಗಣೇಶನನ್ನು ಕೂರಿಸಿದ್ದಾರೆ. ಸೆಪ್ಟೆಂಬರ್ ಹನ್ನೊಂದರಂದು ಗಣೇಶ ಮೂರ್ತಿಯನ್ನು ನಾಗಮಂಗಲ ಪಟ್ಟಣದ ಮಧ್ಯದಲ್ಲಿರುವ ಹಂಪಯ್ಯನ ಕೊಳದಲ್ಲಿ ವಿಸರ್ಜಿಸಲು ಸಂಜೆ ನಾಲ್ಕೈದು ಗಂಟೆಗೆ ಊರಿನಿಂದ ಮೆರವಣಿಗೆ ಹೊರಟು ನಾಗಮಂಗಲ ಪಟ್ಟಣ ತಲುಪುವಲ್ಲಿ ಸಂಜೆ ಆರೂವರೆ ಏಳು ಗಂಟೆಯಾಗಿದೆ. ಮೆರವಣಿಗೆ ನಡೆಸಲು ಯಾವುದೇ ಪರವಾನಗಿಯನ್ನು ಪಡೆಯದ ಗಣೇಶನ ಭಕ್ತರು ಮೆರವಣಿಗೆಯನ್ನು ಸಾಮಾನ್ಯವಾಗಿ ಹೋಗುವ ದಾರಿಯ ಕಡೆ ತಿರುಗಿಸದೆ ಮೈಸೂರು ರಸ್ತೆಯಲ್ಲಿ ತೆಗೆದುಕೊಂಡು ಹೋಗಿ ಸುತ್ತು ಹೊಡೆದುಕೊಂಡು ತಿರುಗಿ ಬರಲು ಪ್ರಯತ್ನಿಸಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ಮಂಡ್ಯ ವೃತ್ತದ ಬಳಿ ಮೆರವಣಿಗೆಯನ್ನು ತಡೆದಿದ್ದಾರೆ. ಆಗ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಮೆರವಣಿಗೆಯನ್ನು ಮೈಸೂರು ರಸ್ತೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ವೃತ್ತದಿಂದ ಮೈಸೂರು ರಸ್ತೆಯಲ್ಲಿ ಕೇವಲ ನೂರು ಮೀಟರ್ ಅಂತರದಲ್ಲಿ ಒಂದು ಮಸೀದಿ ಇದೆ. ಆ ಮಸೀದಿಯ ಮುಂದೆ ಮೆರವಣಿಗೆ ಹೋದ ತಕ್ಷಣವೇ ಅಪಾರ ಪ್ರಮಾಣದ ಪಟಾಕಿ ಸಿಡಿಸಿದ ಭಕ್ತರು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳನ್ನು ಮೊಳಗಿಸಿ ಮಸೀದಿ ಎದುರಿನ ಸ್ಥಳದಲ್ಲಿ ಹದಿನೈದು ಇಪ್ಪತ್ತು ನಿಮಿಷ ಮೆರವಣಿಗೆಯನ್ನು ನಿಲ್ಲಿಸಿದ್ದಾರೆ. ಮಸೀದಿಯಲ್ಲಿ ನಮಾಜು ಮಾಡುತ್ತಿದ್ದ ಕೆಲವರು ಹೊರಗಡೆ ಬಂದು ಗಲಾಟೆ ಮಾಡುವುದನ್ನು ಆಕ್ಷೇಪಿಸಿದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಆ ಸಂದರ್ಭದಲ್ಲೇ ಕಲ್ಲು ತೂರಾಟ ಆರಂಭವಾಗಿ ಪರಿಸ್ಥಿತಿ ನಿಯಂತ್ರಣ ಮೀರಿದೆ.
ಮೊದಲು ಯಾರು ಕಲ್ಲು ಬೀಸಾಡಿದರು ಎಂಬುದಕ್ಕೆ ನಿಖರವಾದ ಮಾಹಿತಿ ಇಲ್ಲವಾದರೂ ಎರಡೂ ಕಡೆಯಿಂದ ಕಲ್ಲಿನ ವಿನಿಮಯ ನಡೆದಿದೆ. ಬೆರಳೆಣಿಕೆಯಷ್ಟಿದ್ದ ಪೊಲೀಸರು ಪೆಟ್ಟು ತಿಂದು ಅಲ್ಲಿಂದ ಮೆರವಣಿಗೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಲೂ ಗಣಪತಿ ಮೂರ್ತಿಯನ್ನು ವಿಸರ್ಜಿಸಿ ತೆರಳಿದ್ದರೆ ಒಂದು ಹಂತಕ್ಕೆ ಸಮಸ್ಯೆ ಮುಗಿದು ಹೋಗುತ್ತಿತ್ತು. ಆದರೆ ಗಣಪತಿ ಭಕ್ತರು ಗಣೇಶನ ಮೂರ್ತಿಯನ್ನು ಪೊಲೀಸ್ ಠಾಣೆಯ ಮುಂದೆ ತಂದು ನಿಲ್ಲಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಿಂದ ಜನರನ್ನು ಕರೆಸಿಕೊಂಡು ತಮ್ಮ ಬಲ ಹೆಚ್ಚಿಸಿಕೊಂಡಿದ್ದಾರೆ.
ಹೀಗೆ ಬಲ ಹೆಚ್ಚಾದ ಮೇಲೆ ಅಲ್ಪಸಂಖ್ಯಾತರ ವ್ಯಾಪಾರಿ ಸ್ಥಳಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಪೊಲೀಸ್ ಠಾಣೆಯಿಂದ ಕೇವಲ ಇಪ್ಪತ್ತೈದು ಮೀಟರ್ ಅಂತರದಲ್ಲಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಸೇರಿದ ಸ್ಟೆಷನರಿ ಅಂಗಡಿಗೆ ಬೆಂಕಿ ಹಾಕಿದ್ದಾರೆ. ನಂತರ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಬೀದಿಗಳಲ್ಲಿರುವ ಮುಸಲ್ಮಾನರ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದ್ದಾರೆ.
ಮುಸ್ಲಿಂ ಅಲ್ಪಸಂಖ್ಯಾತರ ಅಂಗಡಿಗಳೇ ಗುರಿ:
ಬೆಂಕಿ ಹಚ್ಚುವಾಗಲೂ ಬಹಳ ಯೋಜಿತವಾಗಿ ಅಲ್ಪಸಂಖ್ಯಾತರಿಗೆ ಸೇರಿದ ಅಂಗಡಿಗಳನ್ನೇ ಗುರುತಿಸಿ ಹಚ್ಚಿದ್ದಾರೆ. ಪೊಲೀಸ್ ಠಾಣೆಯ ಹಿಂದಿನ ರಸ್ತೆಯಲ್ಲಿ ಗಣೇಶ್ ಜ್ಯೂಯಲರಿ ಅಂಗಡಿಯ ಅಕ್ಕಪಕ್ಕದ ಎರಡು ಮುಸಲ್ಮಾನರ ಅಂಗಡಿಗಳು ಸುಟ್ಟು ಹೋಗಿವೆ. ಆದರೆ ಮಧ್ಯದಲ್ಲಿರುವ ಗಣೇಶ ಜ್ಯೂಯಲರಿಗೆ ಸಣ್ಣ ಹಾನಿಯೂ ಸಂಭವಿಸಲಿಲ್ಲ. ಅದೇ ರೀತಿ ಮೂರ್ನಾಲ್ಕು ಸುಟ್ಟು ಹೋಗಿರುವ ಅಂಗಡಿಗಳ ಪಕ್ಕದಲ್ಲಿರುವ ಹಿಂದೂ ಸಮೂದಾಯಕ್ಕೆ ಸೇರಿದ ಅಂಗಡಿಗಳಿಗೆ ಯಾವುದೇ ಹಾನಿಯಾಗಿಲ್ಲ.
ಆದರೆ ಮುಸಲ್ಮಾನರು ಹೆಚ್ಚಿರುವ ತಹಶಿಲ್ದಾರ್ ಕಛೇರಿ ಹಿಂದುಗಡೆ ಮತ್ತು ಅಕ್ಕಪಕ್ಕದಲ್ಲಿ ಹಿಂದೂಗಳಿಗೆ ಸೇರಿದ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಮುಸಲ್ಮಾನರ ಕಟ್ಟಡದಲ್ಲಿದ್ದ ಹಿಂದೂಗಳ ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿ ಇಟ್ಟು ಸಂಪೂರ್ಣವಾಗಿ ಸುಟ್ಟು ಹಾಕಲಾಗಿದೆ. ಹೀಗೆ ಎರಡೂ ಕಡೆಯವರು ಅನ್ಯಧರ್ಮೀಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಮುಸಲ್ಮಾನರಿಗೆ ಸೇರಿದ ಆಸ್ತಿ ಪಾಸ್ತಿ ಹೆಚ್ಚಾಗಿ ನಾಶವಾಗಿದೆ.
ಸಂಘ ಪರಿವಾರದ ಸಂಚು:
ಮೆರವಣಿಗೆ, ಗಲಾಟೆ ನಂತರದಲ್ಲಿ ಬೆಂಕಿ ಹಚ್ಚಿರುವ ವಿಧಾನವನ್ನು ಗಮನಿಸಿದರೆ ಇದರಲ್ಲಿ ಸಂಘ ಪರಿವಾರದ ಸಂಚು ನಿಚ್ಚಳವಾಗಿದೆ. ಇದುವರೆಗೂ ಕೇವಲ ಗಣೇಶನಿಗೆ ಮಾತ್ರ ಸೀಮಿತವಾಗಿದ್ದ ಮೆರವಣಿಗೆ ಘೋಷಣೆಗಳಲ್ಲಿ ಈಗ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಕಾಣಿಸಿಕೊಂಡಿವೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೇಸರಿ ಶಾಲು ಮತ್ತು ತಲೆಗೆ ಕೇಸರಿ ಪಟ್ಟಿ ಕಟ್ಟಲಾಗಿದೆ. ಅಲ್ಲೋ ಇಲ್ಲೋ ಒಂದೆರಡು ಕಾರ್ಯಕರ್ತರನ್ನು ಹೊಂದಿದ್ದ ಸಂಘ ಪರಿವಾರ ಗಣೇಶನ ಮೂರ್ತಿ ಸ್ಥಾಪನೆ, ಕಾರ್ಯಕ್ರಮ ಎಲ್ಲಕ್ಕೂ ಹಣಕಾಸು ಮತ್ತು ಯೋಜನೆಯನ್ನು ಒದಗಿಸಿ ಗಣೇಶನ ಭಕ್ತರನ್ನು ಸಂಘದ ಕಾರ್ಯಕರ್ತರನ್ನಾಗಿಸುವ ಯೋಜನೆಯನ್ನು ಯೋಜನಾಬದ್ಧವಾಗಿ ಜಾರಿ ಮಾಡುತ್ತಿದೆ.
ಇದನ್ನು ಓದಿ : ಅಕ್ರಮ ಡಿನೋಟಿಫಿಕೇಷನ್ ಆರೋಪ : ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಸಮನ್ಸ್ ಜಾರಿ
ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ:
ನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಾದರೂ ಸಂಘ ಪರಿವಾರ ಕ್ರಿಯಾಶೀಲವಾಗಿದೆ. ಅವರು ಗಣೇಶನನ್ನೂ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ಯೋಜನೆ ಜಾರಿಗೊಳಿಸಲು ಬಳಸುತ್ತಾರೆ. ಈ ಹಿಂದೆಯೂ, ಕಳೆದ ವರ್ಷವೂ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ಸಣ್ಣ ಪುಟ್ಟ ಗಲಾಟೆಗಳು ಆಗಿವೆ. ಹೀಗಿದ್ದಾಗ್ಯೂ ಮಾಹಿತಿ ಕಲೆ ಹಾಕುವಲ್ಲಿ ಮತ್ತು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಗುಪ್ತಚರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿವೆ. ಮೆರವಣಿಗೆಗೆ ಅನುಮತಿಯನ್ನೂ ಪಡೆಯದೆ ಕೇವಲ ನೂರೈವತ್ತರಷ್ಟಿದ್ದ ಮೆರವಣಿಗೆಕಾರರನ್ನು ಮೈಸೂರು ರಸ್ತೆಯ ಮಸೀದಿಯ ಮುಂದೆ ಹೋಗಲು ಬಿಟ್ಟಿದ್ದಾರೆ. ಮಾತ್ರವಲ್ಲ ಗಲಭೆ ಆರಂಭವಾಗಿ ಗಂಟೆಗಳೇ ಕಳೆದರೂ ಕೇವಲ ಹತ್ತನ್ನೆರಡು ಪೊಲೀಸರು ಮಾತ್ರವೇ ಸ್ಥಳದಲ್ಲಿ ಇದ್ದರು. ಅವರೂ ಮೂಕ ಪ್ರೇಕ್ಷಕರಾಗಿದ್ದರು. ಮಂಡ್ಯದಿಂದ ಪೊಲೀಸ್ ವರಿಷ್ಟಾಧಿಕಾರಿಗಳು ಸ್ಥಳಕ್ಕೆ ಬಂದ ನಂತರವಷ್ಟೇ ಒಂದಷ್ಟು ನಿಯಂತ್ರಣ ಸಾಧ್ಯವಾಗಿದೆ. ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಈ ಘಟನೆಗಳನ್ನು ತಡೆಯುವುದು ಸಾಧ್ಯವಿತ್ತು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.
ಜೆಡಿಎಸ್ ಜೊತೆಗಿನ ಮೈತ್ರಿಯ ದುರುಪಯೋಗ:
ಪೊಲೀಸರು ಮತ್ತು ಸಾರ್ವಜನಿಕರು ಹೇಳುವಂತೆ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಕೈಜೋಡಿಸುವ ಮುನ್ನ ಇಂತಹ ಗಲಭೆಯೊಂದನ್ನು ನಡೆಸುವ ಶಕ್ತಿ ಸಂಘ ಪರಿವಾರಕ್ಕೆ ನಾಗಮಂಗಲದಲ್ಲಿ ಇರಲಿಲ್ಲ. ಸಿಪಿಐಎಂ ಪಕ್ಷ ಈಗಾಗಲೇ ಹೇಳಿರುವಂತೆ ಸಂಘ ಪರಿವಾರದ ಮೆದುಳು ಮತ್ತು ಜೆಡಿಎಸ್ ಪಕ್ಷದ ಕೈಕಾಲುಗಳು ಸೇರಿಕೊಂಡು ಕೋಮುವಾದಿಗಳಿಗೆ ಆನೆ ಬಲ ಬಂದಿದೆ. ಮೊನ್ನೆಯ ಗಲಾಟೆಯ ಸಂದರ್ಭದಲ್ಲಿ ಕೂಡಾ ಸ್ವಲ್ಪವೇ ಸಮಯದಲ್ಲಿ ಒಂದು ಸಾವಿರದಷ್ಟು ಜನರನ್ನು ಕಲೆ ಹಾಕುವ ಶಕ್ತಿ ಸಂಘ ಪರಿವಾರಕ್ಕೆ ಬಂದಿರುವುದೇ ಜೆಡಿಎಸ್ ಪಕ್ಷದ ಕಾರಣಕ್ಕೆ. ಸಂಘ ಪರಿವಾರ ನಿಧಾನವಾಗಿ ಜೆಡಿಎಸ್ ಪಕ್ಷದ ಯುವ ಕಾರ್ಯಕರ್ತರ ತಲೆಗಳಿಗೆ ತನ್ನ ಕೋಮುವಾದಿ ವಿಚಾರಗಳನ್ನು ತುರುಕುವಲ್ಲಿ ಯಶಸ್ವಿಯಾಗುತ್ತಿದೆ. ಜೆಡಿಎಸ್ ಬಿಜೆಪಿ ಸಹವಾಸ ಬಿಟ್ಟರೂ ಕಾರ್ಯಕರ್ತರು ಸಂಘದ ಕಾಲಾಳುಗಳಾಗಿ ಬಿಜೆಪಿ ಜೊತೆಯಲ್ಲೇ ಉಳಿದು ಬಿಡುವ ಅಪಾಯವಿದೆ.
ಸೌಹಾರ್ದತೆ ಹಾಳು ಮಾಡುವ ಸಂಘ ಪರಿವಾರದ ಕೋಮುವಾದಿ ಕಾರ್ಯಸೂಚಿಗಳಿಗೆ ಜೆಡಿಎಸ್ ಪಕ್ಷ ಸಹಕರಿಸುವುದು ಜನತಾ ಪರಿವಾರದ ಜಾತ್ಯಾತೀತ ತತ್ವಗಳಿಗೆ ತಿಲಾಂಜಲಿ ನೀಡುವುದು ಯಾವುದೇ ರೀತಿಯಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಸಹಕಾರಿ ಅಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಸಂಘ ಪರಿವಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಗಮನಿಸಬೇಕು, ಈ ಮೂಲಕ ತನ್ನ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ.
ಜೆಡಿಎಸ್ ಪಕ್ಷದ ಅವಕಾಶವಾದಿ ರಾಜಕೀಯ ನಿಲುವುಗಳಿಂದಾಗಿ ಮಂಡ್ಯ ಜಿಲ್ಲೆಯ ಒಕ್ಕಲಿಗರ ನಡುವೆ ಸಂಘ ಪರಿವಾರ ಬೇರು ಬಿಡಲು ಸಾಧ್ಯವಾಗುತ್ತಿದೆ. ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷ ಇದನ್ನು ಆದಷ್ಟು ಬೇಗ ಅರಿತು ಕೋಮುವಾದಿ ಶಕ್ತಿಗಳ ಜೊತೆಗಿನ ತನ್ನ ವ್ಯವಹಾರ ಕಳಚಿಕೊಳ್ಳದಿದ್ದರೆ ಮುಂದಿನ ಎಲ್ಲಾ ಅನಾಹುತಗಳಿಗೆ ಹೊಣೆಯಾಗಬೇಕಾಗುತ್ತದೆ ಎಂದು ಸಿಪಿಐಎಂ ಹೇಳಬಯಸುತ್ತದೆ.
ಮೌನಕ್ಕೆ ಜಾರಿದ ಮಠ; ಸೌಹಾರ್ದತೆಗೆ ಶ್ರಮಿಸಲಿ:
ಆದಿ ಚುಂಚನಗಿರಿಯ ಒಕ್ಕಲಿಗರ ಮಹಾಸಂಸ್ಥಾನ ಮಠಬೇರು ನಾಗಮಂಗಲ ತಾಲ್ಲೂಕು. ನಾಗಮಂಗಲದ ಬೆಳ್ಳೂರಿನಿಂದ ಆರಂಭವಾದ ಮಠ ಇಂದು ಬೃಹದಾಕಾರವಾಗಿ ಬೆಳೆದಿದೆ. ಪಾದಯಾತ್ರೆ ಮಾಡಿ ಮನೆಮನೆಗೆ ತೆರಳಿ ದವಸ ಧಾನ್ಯ ಸಂಗ್ರಹಿಸಿ ಮಠವನ್ನು ಬೆಳೆಸಲಾಗಿದೆ.
ಇಂತಹ ಮಠದ ಕಾಲ ಕೆಳಗೆ ಕೋಮು ಗಲಭೆ ನಡೆದು ಕೋಟ್ಯಂತರ ರೂಪಾಯಿಯ ಆಸ್ತಿ ಪಾಸ್ತಿ ನಷ್ಟವಾಗಿ ಜನತೆ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಮಠದ ಭಕ್ತರು ಸಂಘ ಪರಿವಾರದ ಕಾಲಾಳುಗಳಾಗುತ್ತಿದ್ದಾರೆ ಹಾಗೆಯೇ ಕೆಲವು ಭಕ್ತರು ಕೋಮು ಗಲಭೆಯಿಂದ ತೊಂದರೆಗೂ ಒಳಗಾಗಿದ್ದಾರೆ. ಗಲಭೆ ನಡೆದು ವಾರಗಳು ಉರಳಿದರೂ ಇದುವರೆಗೆ ಮಠದ ಕಡೆಯಿಂದ ಗಲಭೆಯನ್ನು ಖಂಡಿಸಿಯಾಗಲೀ ಅಥವಾ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಿಯಾಗಲೀ ಒಂದು ಹೇಳಿಕೆ ಹೊರಡಲಿಲ್ಲ. ಭಕ್ತರು ಬೀದಿಯಲ್ಲಿ ಬಡಿದಾಡಿಕೊಂಡಿರುವಾಗ ಸ್ವಾಮಿಗಳು ನೆಮ್ಮದಿಯಿಂದ ಪ್ರಾರ್ಥನೆ ಸಲ್ಲಿಸುವುದು ಆತಂಕಕಾರಿ. ಈ ನಡವಳಿಕೆ ಕೋಮುವಾದಿಗಳ ಆಟಾಟೋಪಕ್ಕೆ ತಡೆ ಹಾಕುವುದಿಲ್ಲ ; ಮಠ ಮೌನ ಮುರಿದು ಸೌಹಾರ್ದ ಪರಂಪರೆಯ ಉಳಿವಿಗೆ ಮಾತನಾಡಬೇಕಿದೆ.
ನ್ಯಾಯಾಂಗ ತನಿಖೆಯಾಗಲಿ:
ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ, ಸಂಘ ಪರಿವಾರದ ಸಂಚು ಇವುಗಳನ್ನು ಹೊರಗೆಳೆದು ತಪ್ಪಿತಸ್ಥರೆಂದು ಕಂಡುಬಂದವರನ್ನು ಶಿಕ್ಷಿಸಲು ಹಾಗೂ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನ್ಯಾಯಾಂಗ ತನಿಖೆ ನಡೆಸಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.
ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು:
ಗಲಭೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಕಂದಾಯ ಇಲಾಖೆಯ ವರದಿಗಳ ಪ್ರಕಾರ ಸುಮಾರು 25 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಕೆಲವರಂತೂ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ, ಆದ್ದರಿಂದ ನಷ್ಟ ಅನುಭವಿಸಿರುವ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.
ಜನತೆಯಲ್ಲಿ ಮನವಿ:
ಅದೇ ಸಂದರ್ಭದಲ್ಲಿ ಜನತೆಯನ್ನು ಅವರ ಬದುಕಿನ ಜ್ವಲಂತ ಸಮಸ್ಯೆಗಳಿಂದ ವಿಮುಖಗೊಳಿಸಿ ಗಲಭೆ ಹಬ್ಬಿಸುವ ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳ ವಿರುದ್ಧ ಜನತೆ ಜಾಗೃತರಾಗಬೇಕು ಮತ್ತು ಶಾಂತಿ, ಸೌಹಾರ್ದ ಕಾಪಾಡಿಕೊಳ್ಳಬೇಕೆಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಜನತೆಯಲ್ಲಿ ಮನವಿ ಮಾಡುತ್ತದೆ ಎಂದು ಹೇಳೀದರು. ಈ ವೇಳೆ ಪಕ್ಷದ ಮುಖಂಡರಾದ ಸಿ. ಕುಮಾರಿ, ಕೃಷ್ಣ, ಹನುಮೇಶ್ ಇದ್ದರು.
ಇದನ್ನು ನೋಡಿ : ಸತ್ತವರ ಹೆಸರಲ್ಲಿ ಭೂಮಿ ಕಬಳಿಸಿದ ಕುಮಾರಸ್ವಾಮಿ, ಯಡಿಯೂರಪ್ಪ – ಕೃಷ್ಣ ಬೈರೇಗೌಡ ಆರೋಪ