ನಾಗಾಲ್ಯಾಂಡ್ ನಾಗರಿಕರ ಹತ್ಯೆ: 30 ಯೋಧರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ದಿಮಾಪುರ್: ಮೋನ್ ಜಿಲ್ಲೆಯ ಓಟಿಂಗ್-ತಿರು ಪ್ರದೇಶದಲ್ಲಿ 2021ರ ಡಿಸೆಂಬರ್‌ 4ರಂದು ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ದೊಡ್ಡದೊಂದು ತಪ್ಪು ಸಂಭವಿಸಿ ಕನಿಷ್ಠ 13 ಮಂದಿ ನಾಗರಿಕರು ಮೃತಪಟ್ಟಿದ್ದರು. ಸೇನಾಪಡೆಗಳ ಇಂತಹ ತಪ್ಪು ಕಾರ್ಯಾಚರಣೆಯಿಂದಾಗಿ ಅಮಾಯಕರು ಹತ್ಯೆಯಾಗಿದ್ದು, ದೇಶದಲ್ಲಿ ಬಾರೀ ಸುದ್ದಿಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಲ್ಯಾಂಡ್ ಪೊಲೀಸರು ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ 21 ಪ್ಯಾರಾ ವಿಶೇಷ ಪಡೆಯ ಕನಿಷ್ಠ 30 ಯೋಧರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದಾರೆ.  ಅಲ್ಲದೆ ವಿವೇಚನಾರಹಿತ ಮತ್ತು ಅಸಮಂಜಸವಾದ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವಿಶೇಷ ಪಡೆಗಳ ಕಾರ್ಯಾಚರಣೆ ತಂಡವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಮತ್ತು ಎಂಗೇಜ್‌ಮೆಂಟ್ ನಿಯಮಗಳನ್ನು ಅನುಸರಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.

ಚುಮೌಕೆಡಿಮಾ ಪೊಲೀಸ್ ಸಂಕೀರ್ಣದಲ್ಲಿ ಮಾತನಾಡಿದ ನಾಗಾಲ್ಯಾಂಡ್ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಟಿ ಜಾನ್ ಲಾಂಗ್‌ಕುಮರ್, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ 13 ನಾಗರಿಕರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಟಿಜಿತ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 5ರಂದು ರಾಜ್ಯ ಅಪರಾಧ ಪೊಲೀಸರು ಭಾರತೀಯ ಸೇನೆಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 304 ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ಮರು-ನೋಂದಾಯಿಸಿ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ಹಸ್ತಾಂತರಿಸಲಾಯಿತು ಎಂದರು.

ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಅನ್ನು 2022ರ ಮೇ 30ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಡಿಜಿಪಿ ಹೇಳಿದರು. ಮೇಜರ್, ಇಬ್ಬರು ಸುಬೇದಾರ್, ಎಂಟು ಹವಾಲ್ದಾರರು, ನಾಲ್ವರು ನಾಯ್ಕ್, ಆರು ಲ್ಯಾನ್ಸ್ ನಾಯ್ಕ್ ಮತ್ತು ಒಂಬತ್ತು ಪ್ಯಾರಾಟ್ರೂಪರ್‌ಗಳು ಸೇರಿದಂತೆ 30 ಯೋಧರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಕಾನೂನು ಕ್ರಮಕ್ಕೆ ಅನುಮತಿ ಕೋರಿ ಸಿಐಡಿ ವರದಿಯನ್ನು ಈ ವರ್ಷದ ಏಪ್ರಿಲ್ ಮೊದಲ ವಾರದಲ್ಲಿ ಮಿಲಿಟರಿ ವ್ಯವಹಾರಗಳ ಇಲಾಖೆಗೆ ರವಾನಿಸಲಾಗಿದ್ದು ಮೇ ತಿಂಗಳಲ್ಲಿ ಜ್ಞಾಪನೆ ಪತ್ರ ಬಂದಿದೆ. ಪ್ರಾಸಿಕ್ಯೂಷನ್ ಮಂಜೂರಾತಿಗೆ ಕಾಯಲಾಗುತ್ತಿದೆ ಎಂದು ಡಿಜಿಪಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *