ಬೆಂಗಳೂರು: ರಾಷ್ಟ್ರಕವಿ, ನಾಡ ಕವಿ, ಕುವೆಂಪು ಅವರು ರಚಿತ ನಾಡಗೀತೆಯನ್ನು ತಿರುಚಿ, ಅವಮಾನಿಸಿದ ಆರೋಪದ ಮೇಲೆ ರೋಹಿತ್ ಚಕ್ರತೀರ್ಥ ವಿರುದ್ಧ ಕರ್ನಾಟಕ ಪಠ್ಯಪುಸ್ತಕಗಳ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ ಪಿ ಮಾದೇಗೌಡ ಸಿಐಡಿ ಸೈಬರ್ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ನಾಡಗೀತೆಯ ಸಾಲುಗಳನ್ನು ತಿರುಚುವ ಮೂಲಕ ಕುವೆಂಪು ಅವರಿಗೆ ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಸೇರಿ ನಾಡಿನ ಪ್ರಜ್ಞಾವಂತರು ಆಗ್ರಹಿಸಿದ್ದರು. ಇದೀಗ ರಾಜ್ಯ ಸರ್ಕಾರ ಅದರ ಮೂಲ ಪತ್ತೆಗೆ ಮುಂದಾಗಿದೆ.
ದೂರಿನಲ್ಲಿ ಏನಿದೆ?
“ಕನ್ನಡ ನಾಡಿನ ನಾಡಗೀತೆಯಲ್ಲಿನ ಸಾಲುಗಳನ್ನು ತಿರುಚಿ ಅಶ್ಲೀಲ, ಅನುಚಿತ ಹಾಗೂ ಅಸಂಬದ್ಧ ಅರ್ಥ ಬರುವಂತೆ ಮಾಡಲಾಗಿದೆ. ಈ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ, ಅವರ ಅನುಯಾಯಿಗಳಿಗೆ, ಸಮಸ್ತ ಕನ್ನಡಿಗರ ಭಾವನೆಗಳಿಗೆ ಹಾಗೂ ನಾಡಗೀತೆಯ ಪಾವಿತ್ರ್ಯತೆಗೆ ಧಕ್ಕೆ ತರುವ ಹಾಗೂ ತಿರುಚಿದ ಸಾಹಿತ್ಯದ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ವಿವಿಧ ರೀತಿಯ ವಿಮರ್ಶೆಗಳು ನಿರಂತರ ಕಂಡುಬರುತ್ತಿದೆ.
ಇದರಿಂದ ಸಾಮರಸ್ಯ ಕದಡುವ ಸಾಧ್ಯತೆಗಳಿವೆ. ಈ ಕೃತ್ಯ 2017 ರ ಮಾರ್ಚ್ 16 ರ ಹಿಂದೆ ಘಟಿಸಿದೆ. ಅದೇ ದಿನ ರೋಹಿತ್ ಚಕ್ರತೀರ್ಥ ಈ ಪೋಸ್ಟ್ ಅನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು, ಅದರ ಕೆಳಗೆ ‘ವಾಟ್ಸ್‌ಆ್ಯಪ್‌ನಿಂದ ಬಂದಿದೆ, ಮೂಲ ಕವಿಗಳು ಇದ್ದರೆ ಮುಂದೆ ಬನ್ನಿ ಬುರ್ಜ್ ಖಲೀಫಾ ಕೊಡುತ್ತೇನೆ’ ಎಂಬುದಾಗಿ ಉಲ್ಲೇಖಿಸಿರುವಂತೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ದೂರಿನಲ್ಲಿ ಮಾದೇಗೌಡ ಉಲ್ಲೇಖಿಸಿದ್ದಾರೆ.
ಐದು ವರ್ಷಗಳ ಹಿಂದಿನ ಘಟನೆ
ರೋಹಿತ್ ಚಕ್ರತೀರ್ಥ ಸಮಿತಿಯು ಪರಿಷ್ಕರಣೆ ಮಾಡಿರುವ ಶಾಲಾ ಪಠ್ಯಗಳಿಗೆ ಸಾಹಿತಿಗಳು, ಚಿಂತಕರು, ವಿವಿಧ ಸಂಘಟನೆಗಳು, ಮಠಾಧೀಶರು, ರಾಜಕಾರಣಿಗಳು ಗಂಭೀರವಾದ ವಿರೋಧವನ್ನು ವ್ಯಕ್ತಪಡಿದಿದ್ದಾರೆ. ಪರಿಷ್ಕೃತ ಪಠ್ಯ ಹಿಂಪಡೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದೀಗ ಕಳೆದ ಐದು ವರ್ಷಗಳ ಹಿಂದೆ ತಿರುಚಿದ ನಾಡಗೀತೆ ಸಂದೇಶಗಳ ಬಗ್ಗೆ ಬೆನ್ನುಬಿದ್ದಿದ್ದಾರೆ. ‘ಈ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.