ನಾವು ಅಧಿಕಾರದಲ್ಲಿದ್ದರೆ 15 ನಿಮಿಷದೊಳಗೆ ಚೀನಾ ಸೈನ್ಯವನ್ನು ಹೊರಹಾಕುತ್ತಿದ್ದೆವು: ರಾಹುಲ್‌ ಗಾಂಧಿ

– ಈ ಹಿಂದೆ ಭಾರತದ ಗಡಿಯೊಳಗೆ ಕಾಲಿಡುವ ಧೈರ್ಯ ಚೀನಾ ಮಾಡುತ್ತಿರಲಿಲ್ಲ

ಕುರುಕ್ಷೇತ್ರ (ಹರಿಯಾಣ): ಒಂದು ವೇಳೆ ನಾವು ಅಧಿಕಾರದಲ್ಲಿ ಇದ್ದಿದ್ದರೆ ಚೀನಾ ಸೈನ್ಯವನ್ನು ಲಡಾಕ್‌ನಿಂದ ಹೊರಹಾಕಲು 15 ನಿಮಿಷಗಳಿಗಿಂತ ಹೆಚ್ಚು ಸಮಯ ಹಿಡಿಯುತ್ತಿರಲಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ರಾಹುಲ್‌ ಗಾಂಧಿ, ‘ಚೀನಾ ಸೈನ್ಯವು ಈ ಹಿಂದೆ ಭಾರತದ ಭೂಪ್ರದೇಶದೊಳಗೆ ಕಾಲಿಡುವ ಧೈರ್ಯ ಹೊಂದಿರಲಿಲ್ಲ. ಆದರೆ, ಅದು ಈಗ ಭಾರತದ 1200 ಚದರ ಕಿ.ಮೀ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ವಿಚಾರವನ್ನು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

‘ತನ್ನ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬೇರೆ ದೇಶವೊಂದಕ್ಕೆ ಅನುವು ಮಾಡಿಕೊಟ್ಟಿರುವ ಏಕೈಕ ದೇಶ ಭಾರತವಾಗಿದೆ. ಚೀನಾ ಪಡೆಗಳು ನಮ್ಮ ಭೂಪ್ರದೇಶದೊಳಗೆ ಇವೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಮೋದಿ ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುತ್ತಾರೆ. ಅವರು ಯಾವ ರೀತಿಯ ದೇಶಭಕ್ತರು?’ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

‘ಒಂದು ವೇಳೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಿದ್ದರೆ ಚೀನಾವನ್ನು ಹೊರಹಾಕಲು 15 ನಿಮಿಷಗಳಿಗಿಂತ ಹೆಚ್ಚು ಸಮಯ ಹಿಡಿಯುತ್ತಿರಲಿಲ್ಲ’ ಎಂದು ರಾಹುಲ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *