ಉಡುಪಿ: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತ ಪರಿಷತ್ (ನ್ಯಾಕ್) ಶ್ರೇಯಾಂಕವು ಪದವಿ ಶಿಕ್ಷಣ ಬೋಧಿಸುವ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಅತಿ ಅವಶ್ಯವಾಗಿದೆ. ಆದರೆ ರಾಜ್ಯದ ಶೇ. 76ರಷ್ಟು ಶಿಕ್ಷಣ ಸಂಸ್ಥೆಗಳು ಇನ್ನೂ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಟ್ಟಿಲ್ಲ.
ಉನ್ನತ ಶಿಕ್ಷಣದ ಈ ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ಗುಣಮಟ್ಟ ದೃಢೀಕರಣ ಸಮನ್ವಯ ಸಮಿತಿ ರಚನೆಗೆ ಸರಕಾರ ಮುಂದಾಗಿದೆ. ಉನ್ನತ ಶಿಕ್ಷಣ ಇಲಾಖೆ ಸಚಿವರು ಇದರ ಮುಂದಾಳತ್ವ ವಹಿಸಲಿದ್ದಾರೆ.
ರಾಜ್ಯದಲ್ಲಿ 440 ಸರಕಾರಿ ಪದವಿ ಕಾಲೇಜು, ತಲಾ 2 ಸರಕಾರಿ ಚಿತ್ರಕಲಾ ಹಾಗೂ ಸರಕಾರಿ ಸಂಸ್ಕೃತ ಕಾಲೇಜುಗಳಿವೆ. 2024ರ ಎಪ್ರಿಲ್ನಿಂದ 2025ರ ಮಾರ್ಚ್ ಅಂತ್ಯದವರೆಗೆ ನ್ಯಾಕ್ ಮ್ಯಾನತೆಗೆ ಒಳ ಪಟ್ಟಿರುವುದು ಕೇವಲ 30 ಕಾಲೇಜು ಗಳು. ಅದರಲ್ಲೂ ಎ ಮತ್ತು ಎ+ ಶ್ರೇಯಾಂಕ ಪಡೆದಿರುವುದು 2 ಕಾಲೇಜುಗಳು ಮಾತ್ರ.
ಇದನ್ನೂ ಓದಿ: ಬೆಂಗಳೂರು| ಸಿಇಟಿ ಫಲಿತಾಂಶ ಮೇ 25 ರೊಳಗೆ ಪ್ರಕಟಿಸುವ ಸಾಧ್ಯತೆ
ಸರಕಾರಿ ಕಾಲೇಜುಗಳ ನ್ಯಾಕ್ ಸ್ಥಿತಿಗತಿ
ಪ್ರತೀ ವರ್ಷ ಕಾಲೇಜುಗಳಿಗೆ ನ್ಯಾಕ್ ಮೌಲ್ಯಮಾಪನೆಗೆ ತಂಡ ಭೇಟಿ ನೀಡಲಿದೆ. ಆ ಸಂದರ್ಭದಲ್ಲಿ ಕಾಲೇಜುಗಳು ತಮ್ಮಲ್ಲಿರುವ ಸೌಲಭ್ಯದ ಜತೆಗೆ ಬೋಧನೆ ಸಹಿತ ಶೈಕ್ಷಣಿಕ ಗುಣಮಟ್ಟದ ಸಂಪೂರ್ಣ ಮಾಹಿತಿ ಒದಗಿಸ ಬೇಕಾಗುತ್ತದೆ. ಈ ಮಾಹಿತಿಯ ಆಧಾರದಲ್ಲಿ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯುತ್ತವೆ. ಖಾಸಗಿ ಹಾಗೂ ಅನುದಾನಿತ ಕಾಲೇಜುಗಳು ಈ ವಿಚಾರದಲ್ಲಿ ಸರಕಾರಿ ಕಾಲೇಜುಗಳಿಗಿಂತ ಮುಂದಿವೆ. ಆದರೆ ಬಹುತೇಕ ಸರಕಾರಿ ಕಾಲೇಜುಗಳು ಗುಣಮಟ್ಟದ ವಿಚಾರವಾಗಿ ನ್ಯಾಕ್ ಮಾನ್ಯತೆ ಪಡೆಯುವಲ್ಲಿ ವಿಫಲವಾಗುತ್ತಿವೆ.
ಬೆಂಗಳೂರು ವಿಭಾಗದ 6, ಧಾರವಾಡ ವಿಭಾಗದ 7, ಕಲಬುರಗಿ ವಿಭಾಗದ 6, ಮಂಗಳೂರು ವಿಭಾಗದ 5, ಮೈಸೂರು ಹಾಗೂ ಶಿವಮೊಗ್ಗ ವಿಭಾಗದ ತಲಾ 3 ಕಾಲೇಜುಗಳು ಸೇರಿದಂತೆ 30 ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದಿವೆ. ಅದರಲ್ಲಿ 15 ಕಾಲೇಜುಗಳು ಬಿ ಶ್ರೇಣಿ, 3 ಕಾಲೇಜುಗಳು ಬಿ++, 6 ಕಾಲೇಜು ಬಿ+, 4 ಕಾಲೇಜುಗಳು ಸಿ ಶ್ರೇಣಿ ಪಡೆದಿವೆ. (ಎ ಮತ್ತು ಎ+ ತಲಾ ಒಂದು ಕಾಲೇಜು).
ಗುಣಮಟ್ಟ ದೃಢೀಕರಣ ಸಮನ್ವಯ ಸಮಿತಿಯಲ್ಲಿ ಉನ್ನತ ಶಿಕ್ಷಣ ಸಚಿವರು ಅಧ್ಯಕ್ಷರಾಗಿದ್ದರೆ, ಇಲಾಖೆ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರಾ ಗಿರುತ್ತಾರೆ. ತಲಾ ಇಬ್ಬರು ಅಥವಾ ಮೂವರು ವಿವಿಗಳ ಕುಲಪತಿಗಳು, ಕಾಲೇಜಿನ ಪ್ರಾಂಶುಪಾಲರು, ಎನ್ಜಿಒ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ನ್ಯಾಕ್ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸದಸ್ಯರಾಗಿದ್ದು, ಇಲಾಖೆಯ ನೋಡಲ್ ಅಧಿಕಾರಿಯನ್ನು ಸಮಿತಿ ಒಳಗೊಂಡಿರುತ್ತದೆ.
ಸಮಿತಿ ಏನೇನು ಮಾಡಲಿದೆ
ಗುಣಮಟ್ಟದ ಆಧಾರದಲ್ಲಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಏಕೀಕೃತ ಪರಿಶೀಲನೆ ವ್ಯವಸ್ಥೆಯಡಿ ತರಲಿದೆ. ರಾಜ್ಯಮಟ್ಟದಲ್ಲಿ ಅಥವಾ ಸರಕಾರದ ಹಂತದಲ್ಲಿ ಆಗಲಿರುವ ಶೈಕ್ಷಣಿಕ ಒಡಂಬಡಿಕೆ, ಸಹಯೋಗಳನ್ನು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಹಂತದಲ್ಲಿ ಅನುಷ್ಠಾನಕ್ಕೆ ತರಲು ಮತ್ತು ಅದರ ಮೇಲ್ವಿಚಾರಣೆಗಾಗಿ ಕೆಲಸ ಮಾಡಲಿದೆ.
ಕಾಲೇಜುಗಳ ಶೈಕ್ಷಣಿಕ ಕಾರ್ಯಾಭಾರ, ಚಟುವಟಿಕೆಯ ಮೇಲ್ವಿಚಾರಣೆ, ನ್ಯಾಕ್ ಸಂಸ್ಥೆಗೆ ಸಲ್ಲಿಸಬೇಕಿರುವ ವಾರ್ಷಿಕ ವರದಿ ಸಿದ್ಧಪಡಿಸಲು ಮಾರ್ಗದರ್ಶನ ಮಾಡಲಿದೆ. ನ್ಯಾಕ್ ಪ್ರಕ್ರಿಯೆಗೆ ಒಳಪಡುವ ಕಾಲೇಜುಗಳಿಗೆ ಅಗತ್ಯವಿರುವ ಎಸ್ಒಪಿ ಸಿದ್ಧಪಡಿಸಿ, ದಾಖಲೆ ಪರಿಶೀಲಿಸಿ ಅದನ್ನು ಏಕರೂಪಕ್ಕೆ ತರುವ ಕಾರ್ಯ ಸಮಿತಿ ಮಾಡಲಿದೆ.
ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಖಾಸಗಿ, ಅನು ದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳ ಗುಣಮಟ್ಟ ವೃದ್ಧಿಸಲು, ನ್ಯಾಕ್ ಮಾನ್ಯತೆ ಪಡೆಯಲು ಅನುಕೂಲ ವಾಗುವಂತೆ ಮಾರ್ಗದರ್ಶನ, ಎಸ್ಒಪಿ ರಚಿಸಲು ಕಾಲೇಜು ಶಿಕ್ಷಣ ಇಲಾಖೆಯ ಪ್ರಸ್ತಾವನೆಯಂತೆ ರಾಜ್ಯಮಟ್ಟದ ಸಮಿತಿ ರಚನೆಗೆ ಆದೇಶ ನೀಡಲಾಗಿದೆ.ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್ ಹೇಳಿದ್ದಾರೆ.
ಇದನ್ನೂ ನೋಡಿ: ದೇಶದ ಜನರಿಗೆ ತಣ್ಣೀರು ಎರಚುತ್ತಿರುವ ಮೋದಿ Janashakthi Media