ಮೈಸೂರು: ನಗರದ ಕೇಂದ್ರ ಕಾರಾಗೃಹದಿಂದ ಪೆರೋಲ್ ಮೇಲೆ ಹೊರ ಬಂದಿದ್ದ ಮೂವರು ಖೈದಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬ ಒಡಿಶಾದಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧನವಾಗಿದ್ದು ಮತ್ತೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
60 ದಿನಗಳ ಅವಧಿಗೆ ಪೆರೋಲ್‌ನಲ್ಲಿ ತೆರಳಿದ ನಂತರ, ಕೊಲೆ ಪ್ರಕರಣದಲ್ಲಿ ಸಜಾ ಖೈದಿಯಾಗಿದ್ದ ಹಾಸನ ಮೂಲದ ನವೀನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತೊಬ್ಬ ಒಡಿಶಾ ರಾಜ್ಯದ ಸುನೀಲ್ ಬೀರಾ ಪೆರೋಲ್‌ನಲ್ಲಿ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದಾನೆ. ಮತ್ತೊಬ್ಬ ಖೈದಿ ವೆಂಕಣ್ಣ ಆಂಧ್ರ ರಾಜ್ಯದ ವಿಶಾಖಪಟ್ಟಣ ನಿವಾಸಿ ವೆಂಕಣ್ಣ ಪೆರೋಲ್‌ನಲ್ಲಿ ಬಿಡುಗಡೆಯಾಗಿ ತೆರಳಿದ ನಂತರ ಒಡಿಶಾದಲ್ಲಿ ಗಾಂಜಾ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.
ಹಾಸನದ ನವೀನ್ ಡಿಸೆಂಬರ್ 6 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಸ್ವಗ್ರಾಮ ಹಲಸನಹಳ್ಳಿಗೆ ತೆರಳಿದ್ದಾನೆ. ಫೆ.2 ರಂದು ಅವಧಿ ಮುಗಿದು ಶರಣಾಗಬೇಕಿತ್ತು. ಆದರೆ ನವೀನ್ ಈ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು| ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ
ಒಡಿಶಾ ಮೂಲದ ಸುನೀಲ್ ಬೀರಾ ಡಿ.12 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಪೆರೋಲ್ ಮೇಲೆ ತೆರಳಿದ್ದಾನೆ. ನಿಗದಿತ ಸಮಯಕ್ಕೆ ಶರಣಾಗದೆ ನಾಪತ್ತೆಯಾಗಿದ್ದಾನೆ. ಆಂಧ್ರ ರಾಜ್ಯ ವಿಶಾಖಪಟ್ಟಣದ ವೆಂಕಣ್ಣ ಡಿಸೆಂಬರ್‌ನಲ್ಲಿ ತೆರಳಿದವನು ನಿಗದಿತ ಸಮಯಕ್ಕೆ ಹಿಂದಿರುಗಿ ಶರಣಾಗಿಲ್ಲ. ಈತ ಒಡಿಶಾದಲ್ಲಿ ಗಾಂಜಾ ಪ್ರಕರಣದಲ್ಲಿ ಸಿಲುಕಿ ಜೈಲುವಾಸಿಯಾಗಿದ್ದಾನೆ.
ವೆಂಕಣ್ಣ ಪ್ರಕರಣದಲ್ಲಿ ಒಡಿಶಾ ನ್ಯಾಯಾಲಯ ಜಾಮೀನು ನೀಡಿದ ನಂತರ ಮೈಸೂರು ಪೊಲೀಸರು ವಶಕ್ಕೆ ಪಡೆಯಬೇಕಿದೆ. ಸುನೀಲ್ ಬೀರಾ ಪ್ರಕರಣದಲ್ಲಿ ನಾಪತ್ತೆಯಾದವನನ್ನು ಹುಡುಕಬೇಕಿದೆ. ನವೀನ್ ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಒಟ್ಟಾರೆ ಪೆರೋಲ್‌ನಲ್ಲಿ ತೆರಳಿದ ಖೈದಿಗಳು ಮೈಸೂರಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಇದನ್ನೂ ನೋಡಿ: ತ್ರಿಭಾಷ ಸೂತ್ರ ಮತ್ತು ಕಲಿಕಾ ಮಾಧ್ಯಮ – ನಿರಂಜನಾರಾಧ್ಯ.ವಿ.ಪಿJanashakthi Media