ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಯ್ಕೆ

ಮೈಸೂರು:  ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಎಸ್.ಎಂ.ಕೃಷ್ಣ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕಾರ್ಯ ಮಾಡಿದ್ದರು. ಅವರು ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿದ್ದಾಗ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹಾಗಾಗಿ ಎಸ್.ಎಂ. ಕೃಷ್ಣರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 7ರಂದು ಈ ಬಾರಿಯ ದಸರಾಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಮೈಸೂರಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

 

 

ಒಂದು ಲೆಕ್ಕಾಚಾರದಂತೆ ಇದರಿಂದ ಒಕ್ಕಲಿಗ ಸಮುದಾಯಕ್ಕೆ ಒಂದು ಸಂದೇಶ ನೀಡಿದಂತೆ ಆಗಲಿದೆ ಎಂದು ಹೇಳಲಾಗಿದೆ. ಈ ರಾಜಕೀಯ ಲೆಕ್ಕಾಚಾರ ಸಫಲವಾಗುತ್ತೋ ಇಲ್ಲವೋ ಕಾದುನೋಡಬೇಕಿದೆ.
ಎಸ್. ಎಂ. ಕೃಷ್ಣ ಪರಿಚಯ :  1932ರಲ್ಲಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಎಸ್. ಎಂ. ಕೃಷ್ಣ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡರು. 1971ರಲ್ಲಿ ಮತ್ತೊಮ್ಮೆ ಸಂಸದರಾದರು.

ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್. ಎಂ. ಕೃಷ್ಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡರು. ಸಚಿವರಾಗಿ, 1989 ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದರು. ಕರ್ನಾಟಕದ ಉಪಮುಖ್ಯಮಂತ್ರಿಯಾಗಿಯೂ ಕೆಲಸ ನಿರ್ವಹಣೆ ಮಾಡಿದರು. 1999 ರಿಂದ 2004 ರವರೆಗೆ  ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2004-2008ರ ತನಕ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾರಿ ಕಾರ್ಯ ನಿರ್ವಹಣೆ ಮಾಡಿದರು. ಬಳಿಕ ಕಾಂಗ್ರೆಸ್ ಪಕ್ಷ ತೊರೆದ ಎಸ್. ಎಂ. ಕೃಷ್ಣ  2017 ರಲ್ಲಿ ಬಿಜೆಪಿ ಸೇರಿದರು. ವಯೋಸಹಜ ಕಾರಣದಿಂದಾಗಿ ಈಗ ಸಕ್ರಿಯ ರಾಜಕಾರಣದಿಂದ  ದೂರ ಉಳಿದಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *