ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಮಂಗಳವಾರ ರಾತ್ರಿ ನಡೆದ ಅತ್ಯಾಚಾರ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಹತ್ವದ ವಿಷಯ ತಿಳಿಸಿದ್ದಾರೆ.
“ಬಂಧಿತ ಆರೋಪಿಗಳೆಲ್ಲರೂ ದರೋಡೆ ಮಾಡಲು ಹೋಗಿದ್ದರು ಆ ಸಂದರ್ಭದಲ್ಲಿ ಯುವಕ-ಯುವತಿ ಬಳಿ ಏನೂ ಸಿಗದಿದ್ದಾಗ ಯುವತಿಯನ್ನು ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಅತ್ಯಾಚಾರ ಸಂತ್ರಸ್ತ ವಿದ್ಯಾರ್ಥಿನಿಯನ್ನು ಹೆದರಿಸಿ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ದರೋಡೆಗೆ ಪ್ರಯತ್ನಿಸಿ ನಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿದರು.
ʻʻಬಂಧಿತರೆಲ್ಲರೂ ಕಾರ್ಮಿಕರಾಗಿದ್ದು ತಿರುಪುರ ಮೂಲದವರಾಗಿದ್ದಾರೆ. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7 ಹಾಗೂ 8 ತರಗತಿ ಓದಿದ ಇವರೆಲ್ಲರೂ ಡ್ರೈವರ್, ಕಾರ್ಪೆಂಟರ್ ಸೇರಿದಂತೆ ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿರುವವರು. ಅದರಲ್ಲಿ ಒಬ್ಬ ಬಾಲಕ 17 ವರ್ಷದವನಿದ್ದಾನೆ ಎನ್ನುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ. ಆದರೆ, ಅದು ಇನ್ನೂ ಖಚಿತವಾಗಬೇಕಿದೆ,” ಎಂದು ಅವರು ಹೇಳಿದರು.
ಇದನ್ನು ಓದಿ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಕೆಲಸಕ್ಕೆಂದು ಮೈಸೂರಿಗೆ ಬಂದಿದ್ದ ಆರೋಪಿಗಳು ಕೆಲಸ ಮುಗಿಸಿ ಕಂಠಪೂರ್ತಿ ಕುಡಿದು ಬಂದು ಪಾರ್ಟಿ ಮಾಡುತ್ತಿದ್ದರು. ಸಂತ್ರಸ್ಥ ಯುವತಿ ಮತ್ತು ಆಕೆಯ ಗೆಳೆಯ ಇದ್ದಾಗ ಇದೇ ಘಟನೆ ನಡೆದಿದೆ. ಇದೊಂದು ಕುರುಡುತನದ ಪ್ರಕರಣ ಆಗಿದ್ದು, ವೈಜ್ಞಾನಿಕ ಸುಳಿವಿನಿಂದ ಪತ್ತೆ ಹಚ್ಚಬೇಕಾಗಿದೆ. ಪ್ರತಾಪ್ ರೆಡ್ಡಿ ಇಲ್ಲೇ ಇದ್ದು ತನಿಖೆ ಮಾಡಿದ್ದಾರೆ’’ ಎಂದು ಹೇಳಿದರು.
ಅತ್ಯಾಚಾರದಲ್ಲಿ 6 ಮಂದಿ ಭಾಗಿಯಾಗಿದ್ದು ಓರ್ವ ತಲೆಮರೆಸಿಕೊಂಡಿದ್ದಾನೆ, ಆತನ ಹುಡುಕುತ್ತಿದ್ದು ಶೀಘ್ರವೇ ಬಂಧನಕ್ಕೆ ಒಳಪಡಿಸಲಾಗುವುದು. ಈ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು. ಸಂತ್ರಸ್ತೆಯ ಸ್ನೇಹಿತನಿಂದ ಸ್ವಲ್ಪ ಮಾಹಿತಿಯ ಸುಳಿವಿನಿಂದಾಗಿ ಪ್ರಕರಣವನ್ನು ಶೀಘ್ರದಲ್ಲಿ ಬೇಧಿಸಲು ಸಾಧ್ಯವಾಗಿದೆ ಇದರಿಂದ ಐವರು ಆರೋಪಿಗಳ ಬಂಧನವಾಗಿದೆ. ಹೈಕೋರ್ಟ್ ಆದೇಶದಂತೆ ಜಾಸ್ತಿ ಮಾಹಿತಿ ನೀಡಲಾಗುವುದಿಲ್ಲ ಎಂದರು.
ಇದನ್ನು ಓದಿ: ಸಂಜೆಯ ನಂತರ ಮಹಿಳೆ ಹೊರ ಬರುವುದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ
“ಆರೋಪಿಗಳ ಪತ್ತೆಯ ಕಾರ್ಯಚರಣೆಯಲ್ಲಿದ್ದ ಇಡೀ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನವಾಗಿದೆ. ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸುತ್ತೇವೆ,” ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪ್ರಾಥಮಿಕವಾಗಿ ತನಿಖೆ ಮಾತ್ರ ನಡೆದಿದೆ. ಮೈಸೂರು ಸಿಟಿ, ದಕ್ಷಿಣ ವಲಯ ಪೊಲೀಸರು ಸೇರಿ ವಿಶೇಷ ತಂಡ ಮಾಡಲಾಗಿತ್ತು. ಒಟ್ಟು ಆರು ಜನ ಆರೋಪಿಗಳಾಗಿದ್ದಾರೆ.