ರೈತ ನಾಯಕ, ಛಾಯಚಿತ್ರಗ್ರಾಹಕ ಎಚ್.ಆರ್. ನವೀನ್ ಕುಮಾರ್ರವರು ಮೈಸೂರು ದಸರಾದಲ್ಲಿನ ತೆರೆಯ ಹಿಂದಿನ ಅದ್ಭುತ ಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆಯ್ದ ಪ್ರಮುಖ ಚಿತ್ರಗಳನ್ನು ವಿವರಗಳ ಸಮೇತ ಈ ಕೆಳಗೆ ನೀಡಲಾಗಿದೆ.
ಎಲ್ಲರೂ ನೆಮ್ಮದಿಯಿಂದಿರಲು ಇವರು ತಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ವಾರಗಟ್ಟಲೆ ಬೆಳಗಿಂದ ರಾತ್ರಿಯವರೆಗೂ ನಿಂತಂಗೆ ನಿಂತಿರಬೇಕು. ಯಾರೊಂದಿಗೂ ಕೋಪಿಸಿಕೊಳ್ಳದೆ ಮಾಹಿತಿ ನೀಡಬೇಕು, ವಾಹನ ದಟ್ಟಣೆಯನ್ನು ನಿಯಂತ್ರಿಸಬೇಕು. ಕಾಲಕಾಲಕ್ಕೆ ಸರಿಯಾಗಿ ಕುಡಿಯುವ ನೀರೂ ಸಿಗುವುದಿಲ್ಲ. ಇನ್ನೂ ಊಟ ಕೇಳಲೇ ಬೇಡಿ, ಒಂದು ಪೊಟ್ಟಣದಲ್ಲಿ ಪಾರ್ಸಲ್ ತಂದು ಕಾರ್ಯನಿರತ ಸ್ಥಳದಲ್ಲೇ ಕೊಡುತ್ತಾರೆ, ಅಲ್ಲೇ ತಿಂದು ಕೆಲಸ ಮುಂದುವರೆಸ ಬೇಕು. ರಾತ್ರಿ ಕಲ್ಯಾಣ ಮಂಟಪದಲ್ಲಿ ವಸತಿ. ಮೇಲ್ಮಟ್ಟದ ಅಧಿಕಾರಿಗಳು ಎಲ್ಲಾ ಅನುಕೂಲಗಳನ್ನು ಹೊಂದಿದ ಹವಾನಿಯಂತ್ರಿತ ಕೊಠಡಿಗಳಲ್ಲಿರುತ್ತಾರೆ. ಕೆಳಹಂತದ ಪೊಲೀಸರು ರಸ್ತೆಯಲ್ಲಿ ಬಿಸಿಲು ದೂಳಿನ ನಡುವೆ ಬೆವರು ಹರಿಸುತ್ತಾರೆ.
ದಸರಾ ಸಂಪನ್ನವಾಯಿತು ಎಂದು ನಿರರ್ಗಳವಾಗಿ ಹೇಳುವುದರ ಹಿಂದೆ ಇಂತಹವ ಶ್ರಮ ಇರುವುದನ್ನ ಯಾರೂ ಮರೆಯುವಂತಿಲ್ಲ.
ಸರಿಯಾಗಿ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಬರಿಗಾಲಲ್ಲಿ (ಬಹುತೇಕರು) ಸುಮಾರು 5-6 ಕಿಲೋಮೀಟರ್ ಉದ್ದಗಲಕ್ಕೂ ರಸ್ತೆಯ ಮೇಲೆ ತಮ್ಮ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸುತ್ತಾರೆ.
ಇವರಿಗೆ ನೀಡುವ ಸೌಲಭ್ಯ ಮತ್ತು ಭತ್ಯೆ ಕಲೆಗೆ ಅವಮಾನ ಮಾಡುವಂತಿರುತ್ತದೆ. ಆದರೆ ಈ ಕಲಾವಿದರು ಅದಾವುದನ್ನೂ ಲೆಕ್ಕಿಸದೆ ನಾಡ ದಸರಾದ ಮೆರುಗನ್ನು ಹೆಚ್ಚಿಸಲು ತಮ್ಮ ಸಂಕಟಗಳನ್ನೆಲ್ಲ ನುಂಗಿಕೊಂಡು ಹೆಜ್ಜೆಹಾಕುತ್ತಾರೆ.