ಮೈಸೂರು: ಸಂಪ್ರದಾಯದಂತೆ ದರ್ಗಾಕ್ಕೆ ‘ಸಲಾಂ’ ಮಾಡಿದ ದಸರಾ ಆನೆಗಳು!

ಮೈಸೂರು: ನಾಡಿನ ಸೌಹಾರ್ದ ಪರಂಪರೆಯಂತೆ ಈ ವರ್ಷವೂ ದಸರಾ ಜಂಬೂ ಸವಾರಿಯ ಮುನ್ನಾ ದಿನ ಆನೆಗಳು ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್ ಇಮಾಮ್‌ ಶಾ ವಲೀ ದರ್ಗಾಕ್ಕೆ ತೆರಳಿ ಆಶಿರ್ವಾದ ಪಡೆದಿದೆ. ಈ ಮೂಲಕ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಪಾಲಿಸಲಾಗಿದೆ.

ಬಹುತ್ವವನ್ನು ಸಾರುವ ಈ ಆಚರಣೆಯನ್ನು ನೋಡಲು ನೂರಾರು ಜನರು ದರ್ಗಾ ಬಳಿ ಜಮಾಯಿಸಿದ್ದು, ಸೂಫಿ ಸಂತ ಇಮಾಮ್‌ ಶಾ ವಲೀ ಹಾಗೂ ಚಾಮುಂಡೇಶ್ವರಿ ದೇವಿಗೆ ಜಯಕಾರ ಹಾಕಿದ್ದಾಗಿ ಪ್ರಜಾವಣಿ ವರದಿ ಹೇಳಿದೆ. ಸುಮಾರು 82 ವರ್ಷಗಳ ಹಿಂದಿನಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಶಾ ವಲೀ ದರ್ಗಾದ ಮುಖ್ಯಸ್ಥ  ಮೊಹಮ್ಮದ್‌ ನಖೀಬುಲ್ಲಾ ಷಾ ಖಾದ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಶೈಕ್ಷಣಿಕ ಧನ ಸಹಾಯ ಬಿಡುಗಡೆಗೆ ಆಗ್ರಹ | ಕಟ್ಟಡ ಕಾರ್ಮಿಕರ ಮಕ್ಕಳಿಂದ ರಾಜ್ಯವ್ಯಾಪಿ ಪೊಸ್ಟ್ ಕಾರ್ಡ್‌ ಚಳವಳಿ

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “1758ರಲ್ಲಿ ಇಮಾಮ್‌ ಶಾ ವಲೀ ಸಮಾಧಿಯಾದ ನಂತರ 1801ರಿಂದಲೂ ಮೈಸೂರು ಇಲ್ಲಿ ರಾಜವಂಶಸ್ಥರು ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಅದು ಸರಿಯಾಯಿತು. ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ” ಎಂದು ಹೇಳಿದ್ದಾರೆ.

ಸಂಪ್ರದಾಯದಂತೆ ಸೋಮವಾರ ಸಂಜೆ ಕ್ಯಾಪ್ಟನ್‌ “ಅಭಿಮನ್ಯು” ನೇತೃತ್ವದ 14 ಆನೆಗಳು ದರ್ಗಾಕ್ಕೆ ಬಂದಿದೆ. ದರ್ಗಾದಲ್ಲಿ ಆನೆಗಳಿಗೆ ಧೂಪಾರತಿ ಮಾಡಿ ನಂತರ ವಿಭೂತಿಯನ್ನು ಅವುಗಳ ಹಣೆಗೆ ಹಚ್ಚಿ, ದರ್ಗಾದ ಚಾದರ ಮೇಲಿಟ್ಟಿದ್ದ ನವಿಲುಗರಿಯಿಂದ ಆಶೀರ್ವಾದ ಮಾಡಲಾಗಿದೆ. ನಂತರ ಆನೆಗಳು ದರ್ಗಾಕ್ಕೆ ಸೊಂಡಿಲೆತ್ತಿ “ಸಲಾಂ” ಮಾಡಿವೆ. ನಂತರ ಸೂಫಿ ಸಂತರ ಗೌರವಾರ್ಥ ಆನೆಗಳು ಬೆನ್ನು ತೋರಿಸದೆ ಅಲ್ಲಿಂದ ಹಿಮ್ಮುಖವಾಗಿ ಚಲಿಸಿ ಅರಮನೆಗೆ ವಾಪಾಸಾಗಿವೆ.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಎಫ್‌ ಸೌರಭ್‌ ಕುಮಾರ್, “ನಾಡಹಬ್ಬ ದಸರಾ ಸಾಂಸ್ಕೃತಿಕ ವೈವಿಧ್ಯವಿರುವ ಹಬ್ಬವಾಗಿದೆ. ನಾವು ಗಣಪತಿ, ಚಾಮುಂಡೇಶ್ವರಿಗೆ ಪೂಜೆ ಮಾಡುತ್ತೇವೆ. ಅದರಂತೆ ಇಮಾಮ್ ಶಾ ವಲಿ ಅವರ ದರ್ಗಾಕ್ಕೆ ತೆರಳಿ ಆಶಿರ್ವಾದ ಪಡೆಯುತ್ತೇವೆ. ಇದು ಬಹಳ ಖುಷಿಯ ವಿಚಾರವಾಗಿದ್ದು, ನಾಡಹಬ್ಬ ಎಲ್ಲರನ್ನೂ ಒಳಗೊಳ್ಳುತ್ತದೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ” ಎಂದು ಹೇಳಿದ್ದಾರೆ.

 

ವಿಡಿಯೊ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media

Donate Janashakthi Media

Leave a Reply

Your email address will not be published. Required fields are marked *