ಭಾವೈಕ್ಯತೆ ಸಾರುವ ಜಾತ್ರೆ : ಮುಸ್ಲಿಮರ ದರ್ಗಾವನ್ನು ಪೂಜಿಸುವ ಹಿಂದೂಗಳು

ಹರಿಹರ : ರಾಜ್ಯದಲ್ಲಿ ಎಲ್ಲೆಡೆ ಕೋಮು ಗಲಭೆಗಳದ್ದೆ ಮಾತು, ಹಿಜಾಬ್-ಕೇಸರಿ ಶಾಲು ಗಲಾಟೆ , ಹಲಾಲ್ ಕಟ್, ಜಟ್ಕಾ ಕಟ್, ಹುಬ್ಬಳ್ಳಿ ಗಲಭೆ, ಕಲ್ಲಂಗಡಿ ಅಂಗಡಿ ಧ್ವಂಸ, ಹರ್ಷ ಮರ್ಡರ್, ವ್ಯಾಪಾರಕ್ಕೆ ನಿರ್ಬಂಧ, ಒಂದಾ ಎರಡಾ, ಹೇಳ್ತಾ ಹೋದ್ರೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಈ ಗಲಾಟೆಗಳ ನಡುವೆ ಇಲ್ಲೊಂದು ಹಳ್ಳಿಯಲ್ಲಿನ ಸಾಮರಸ್ಯ ದೇಶಕ್ಕೆ ಮಾದರಿ ಎನ್ನುವಂತಿದೆ.

ಹಿಂದು ಮುಸ್ಲಿಂರ ಮಧ್ಯೆ ಸಾಮರಸ್ಯ ಸಾರುವ ಜಾತ್ರೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆಯುತ್ತಿದೆ. ಈ ನಾಗೇನಹಳ್ಳಿ ದೇಶಕ್ಕೆ ಹಿಂದು ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ. ಕಾರಣ, ಈ ಗ್ರಾಮದಲ್ಲಿ ಹಿಂದುಗಳು ಮಾತ್ರ ಇದ್ದಾರೆ. ಆದರೆ, ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬರ ಸಮಾಧಿ ಇದ್ದು, ಆ ಸಮಾಧಿಯನ್ನ ಹಿಂದುಗಳೇ ಪೂಜೆ ಮಾಡುತ್ತಿದ್ದಾರೆ. ಅಲ್ಲದೇ, ಆ ದರ್ಗಾಗೆ ಪಕ್ಕದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂದು ಹೆಸರನ್ನು ಇಟ್ಟಿದ್ದಾರೆ.

ಇತಿಹಾಸವೇನು ?: ಹಲವು ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಸಾಬ್ ಎನ್ನುವ ಪುರುಷನೊಬ್ಬ ಕೇರಳದಿಂದ ಆಗಮಿಸಿದ್ದ. ಬಹುಕಾಲ ವರ್ಷ ಇಲ್ಲಿಯೇ ತಂಗಿದ್ದ ಆ ಜಮಾಲ್ ಸಾಬ್ ಸ್ಥಳೀಯರೊಂದಿಗೆ ಬೆರತು ಹೋಗಿದ್ದರು. ಆನಾರೋಗ್ಯ ಪೀಡಿತ ಜನ ಮತ್ತು ಜಾನುವಾರುಗಳ ರೋಗ ರೂಜಿಗಳನ್ನು ಗಿಡ ಮೂಲಿಕೆ ಹಾಗೂ ಅಲ್ಲಾನ ಹೆಸರಿನಲ್ಲಿ ಹೋಗಲಾಡಿಸುತ್ತಿದ್ದನಂತೆ ಹೀಗಾಗಿ, ಆಗಿನ ಜನರು ಜಮಾಲ್‍ನನ್ನು ಸ್ವಾಮಿ ಎಂದೇ ನಂಬಿದ್ದರು ಎಂದು ಊರ ಹಿರಿಯರು ಹೇಳುತ್ತಾರೆ.

ಅಲ್ಲದೇ, ಆತ ಕಾಲಾನಂತರ ಆತನ ಸಮಾಧಿಯನ್ನು ಅಂದಿನಿಂದ ಇಂದಿನವರೆಗೂ ಪೂಜೆ ಮಾಡುತ್ತಿದ್ದಾರೆ. ಇನ್ನು, ಪ್ರತಿ ವರ್ಷ ಜಮಾಲ್ ಸ್ವಾಮಿ ಉರುಸ್ ಕೂಡ ನಡೆಯುತ್ತಿದ್ದು, ಅದನ್ನು ಸ್ಥಳೀಯ ಹಿಂದೂಗಳೇ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ಉರುಸ್ ನಡೆದಿದ್ದು, ಇಲ್ಲಿಯ ಹಿಂದೂ ಜನರೇ ಆತನಿಗೆ ಪ್ರಸಾದ ಮತ್ತು ಮಾಂಸದೂಟ ಪ್ರಸಾದ ಅರ್ಪಿಸುವ ಮೂಲಕ ಉರುಸ್ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಉರುಸ್ ನಲ್ಲಿ ಸುತ್ತಮುತ್ತಲಿನ ನೂರಾರು ಮುಸ್ಲಿಂ ಬಾಂಧವರು ಕೂಡ ಭಾಗವಹಿಸುತ್ತಾರೆ.

ಇಂದು ದೇಶದಲ್ಲಿ ಹಿಂದೂ, ಮುಸ್ಲಿಂ ಎಂದು ಕೋಮುಗಲಭೆ ಸೃಷ್ಟಯಾಗಿ ಎಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಾಜಕಾರಣಿಗಳು ಧರ್ಮ ಧರ್ಮಗಳ ನಡುವೆ ಜಗಳ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ನಾಗೇನಹಳ್ಳಿಯ ಹಿಂದೂ-ಮುಸ್ಲಿಂರ ಸಾಮರಸ್ಯ ದೇಶಕ್ಕೆ ಮಾದರಿ ಎನ್ನುವಂತಿದೆ. ಈ ಸಾಮರಸ್ಯ ಇಡೀ ದೇಶದಲ್ಲಿ ವ್ಯಾಪಿಸಲಿ.

Donate Janashakthi Media

Leave a Reply

Your email address will not be published. Required fields are marked *