“ಮುಸ್ಲಿಂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಸಾರ್ವಜನಿಕವಾಗಿ ಪ್ರಚೋದಿಸುವವರಿಗೆ ಕಠಿಣ ಶಿಕ್ಷೆಯಾಗಬೇಕು” ರಾಷ್ಟ್ರಪತಿಗಳಿಗೆ ಮಹಿಳಾ ಸಂಘಟನೆಗಳ ಮನವಿ

ಜುಲೈ 2021 ರಲ್ಲಿ, ‘ಸುಲ್ಲಿ ಡೀಲ್ಸ್’ ಎಂಬ ಆ್ಯಪ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲಾಯಿತು, ಇದು ಪ್ರಮುಖ ಮುಸ್ಲಿಂ ಮಹಿಳೆಯರು, ಪತ್ರಕರ್ತರು, ಬರಹಗಾರರು, ಕಾರ್ಯಕರ್ತರು ಮುಂತಾದವರ ‘ಹರಾಜು’ ಮಾಡುತ್ತಿರುವುದಾಗಿ ಹೇಳಿತ್ತು. ಇದನ್ನು ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಬರೆಯುವ ಮತ್ತು ಪ್ರತಿಭಟಿಸುವ ಧೈರ್ಯಶಾಲಿ ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಮತ್ತು ಭಯಭೀತಗೊಳಿಸುವ ಪ್ರಯತ್ನವಾಗಿತ್ತು. ‘ಸುಲ್ಲಿ ಡೀಲ್‌’ಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ವರ್ಷಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಇದೇ ರೀತಿಯ ಆ್ಯಪ್ ‘ಬುಲ್ಲಿ ಬಾಯಿ’ ಕಾಣಿಸಿಕೊಂಡಿದೆ. ಇಸ್ಮತ್ ಅರಾ, ಸೈಮಾ ರಂತಹ ಹಲವಾರು ಪ್ರತಿಷ್ಠಿತ ಮುಸ್ಲಿಂ ಮಹಿಳೆಯರನ್ನು ಹೆಸರಿಸಲಾಗಿದೆ, ಮಾತ್ರವಲ್ಲದೆ ಅವರ ಛಾಯಾಚಿತ್ರಗಳನ್ನು ವೆಬ್ ಸೈಟ್‌ನಲ್ಲಿ ಹಾಕಲಾಗಿದೆ, ನಜೀಬ್ ಅವರ ತಾಯಿ ಫಾತಿಮಾ ಅಮ್ಮಿಯವರ ಹೆಸರು ಕೂಡ ಇದೆ. ಅದು ಮಹಿಳೆಯರನ್ನು ‘ಹರಾಜು’ ಮಾಡುವ ಬಗ್ಗೆಯೂ ಮಾತನಾಡಿದೆ.

ದುರದೃಷ್ಟವಶಾತ್ ನಾವು ಒಂದು ವರ್ಷದೊಳಗೆ ಎರಡನೇ ಬಾರಿಗೆ ಲಜ್ಜೆಗೆಟ್ಟ ಸ್ತ್ರೀದ್ವೇಷದ ಅತ್ಯಂತ ಅಸಹ್ಯಕರ ಪ್ರದರ್ಶನವನ್ನು ಕಾಣುತ್ತಿದ್ದೇವೆ” ಎಂದಿರುವ  ಐದು ರಾಷ್ಟ್ರೀಯ ಮಹಿಳಾ ಸಂಘಟನೆಗಳ ಮುಖಂಡರು ಜಂಟಿಯಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ  ಒಂದು ಜಂಟಿ ಮನವಿಯಲ್ಲಿ “ಸಂವಿಧಾನಿಕ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವ ತಾವು ಮಧ್ಯಪ್ರವೇಶಿಸಲು ತಮ್ಮ ಸುಪರ್ದಿಯಲ್ಲಿರುವ ಎಲ್ಲ ಸಾಧನಗಳನ್ನು ಬಳಸಿಕೊಳ್ಳಬೇಕು ಮತ್ತು ಈ ನೀಚ ಮತ್ತು ಕ್ರಿಮಿನಲ್‍ ವರ್ತನೆಗೆ ಹೊಣೆಗಾರರಾದವರರಿಗೆ ಅದಕ್ಕೆ ತಕ್ಕುದಾದ ತೀವ್ರ ರೀತಿಯ ಶಿಕ್ಷೆಯಾಗುವಂತೆ ಖಚಿತಪಡಿಸಬೇಕು” ಎಂದು ಮನವಿ ಮಾಡಿದ್ದಾರೆ.

ಈ ನೀಚ ನಡೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಸ್ಮತ್‍ ಆರಾ ದೆಹಲಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಜುಲೈನಲ್ಲಿ ‘ಸುಲ್ಲಿ ಡೀಲ್ಸ್’ ಸಮಯದಲ್ಲಿ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈ ನಿಷ್ಕ್ರಿಯತೆಯು ಆಡಳಿತದ ವಿಭಾಗಗಳು ಮತ್ತು ನ್ಯಾಯಾಂಗವು ಕೂಡ ಅಲ್ಪಸಂಖ್ಯಾತರ ವಿರುದ್ಧ ಎಸಗುವ  ಅಪರಾಧ ಕೃತ್ಯಗಳಿಗೆ ಪ್ರೇಕ್ಷಕರಾಗಿ ಉಳಿಯುವ ಪ್ರವೃತ್ತಿಯ ಭಾಗವಾಗಿದೆ ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ  ಈ ಮನವಿಯಲ್ಲಿ ಖೇದ ವ್ಯಕ್ತಪಡಿಸಲಾಗಿದೆ.

ದ್ವೇಷ-ಭಾಷಣವಾಗಲಿ, ದೈಹಿಕ ದಾಳಿಯಾಗಲಿ ಅಥವಾ ಪ್ರಾರ್ಥನಾ ಸಭೆಗಳನ್ನು  ತಡೆಯುವಲ್ಲಾಗಲೀ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಂತಹ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಬಲಿಪಶುಗಳಾಗಿದ್ದಲ್ಲಿ, ಪೊಲೀಸರು, ಆಡಳಿತ ಮತ್ತು ನ್ಯಾಯಾಲಯಗಳು ಸಹ ಮೌನವಾಗಿರುತ್ತವೆ. ಸಾಮಾನ್ಯವಾಗಿ ಪೊಲೀಸರು ದೈಹಿಕವಾಗಿ ಉಪಸ್ಥಿತರಿರುತ್ತಾರೆ ಆದರೆ ಮಧ್ಯಪ್ರವೇಶಿಸುವುದಿಲ್ಲ ಅಥವಾ ಹಾಗೆ ಮಾಡಿದಾಗ, ಅದು ಅಪರಾಧಿಗಳಿಗೆ ಸಹಾಯ ಮತ್ತು ಕುಮ್ಮಕ್ಕು ನೀಡುವುದಕ್ಕಾಗಿಯೇ ಆಗಿರುತ್ತದೆ.ಪರಿಣಾಮವಾಗಿ, ದ್ವೇಷ ಮತ್ತು ಹಿಂಸಾಚಾರವನ್ನು ಬೋಧಿಸುವವರು ಮತ್ತಷ್ಟು ದೌರ್ಜನ್ಯಗಳನ್ನು ಎಸಗುವ ಧೈರ್ಯಮಾಡುತ್ತಾರೆ” ಎಂಬುದನ್ನು ಈ ಮನವಿ ರಾಷ್ಟ್ರಪತಿಗಳ ಗಮನಕ್ಕೆ ತಂದಿದೆ.

ಐಟಿ ಸಚಿವ ಅಶ್ವನಿ ವೈಷ್ಣವ್ ಅವರು ಆ್ಯಪ್‌ನ ಹಿಂದೆ ಇರುವ ಗಿಟ್‌ಹಬ್ ಬಳಕೆದಾರರನ್ನು ‘ಬ್ಲಾಕ್’ ಮಾಡಲಾಗಿದೆ ಎಂದು ಘೋಷಿಸಿದ್ದಾರೆ, ಇದು ತುಂಬಾ ದುರ್ಬಲ ಮತ್ತು ಅಸಮರ್ಪಕ ಪ್ರತಿಕ್ರಿಯೆಯಾಗಿದೆ ಎಂದಿರುವ ಮಹಿಳಾ ಸಂಘಟನೆಗಳ ಮುಖಂಡರು, ಪಿತೃಪ್ರಧಾನ ವ್ಯವಸ್ಥೆ ಪ್ರಬಲವಾಗಿರುವ ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಸಮಾನತೆಯನ್ನು ಅನುಭವಿಸುತ್ತಿರುವ ಮತ್ತು ಕೊನೆಯಿಲ್ಲದ ಹಿಂಸೆಗೆ ಗುರಿಯಾಗುವ ದೇಶದಲ್ಲಿ, ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡ ಸಾರ್ವಜನಿಕ ಪ್ರಚೋದನೆ ಅತ್ಯಂತ ಕೆಟ್ಟ ರೀತಿಯ ಲೈಂಗಿಕ ದೌರ್ಜನ್ಯ, ಇದನ್ನು  ಸಹಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

“ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ಸದಸ್ಯರು ದೈಹಿಕ ಮತ್ತು ಮೌಖಿಕ ಹಿಂಸಾಚಾರವನ್ನು ಎದುರಿಸುತ್ತಿರುವ, ಹಿಂದೂ ಧಾರ್ಮಿಕ ಮುಖಂಡರು ಸಾರ್ವಜನಿಕ ಸಭೆಗಳಲ್ಲಿ ನಿರ್ಭಿಡೆಯಿಂದ ಅವರ ವಿರುದ್ಧ ನರಮೇಧದ ದಾಳಿಗಳನ್ನು ನಡೆಸಲು ಬಹಿರಂಗವಾಗಿ ಕರೆ ನೀಡುವ ಸನ್ನಿವೇಶದಲ್ಲಿ  ಈ ಇತ್ತೀಚಿನ ದೌರ್ಜನ್ಯ ಸಂಭವಿಸಿದೆ ಎಂದು ನಾವು ನಿಮಗೆ ನೆನಪಿಸಲು ಬಯಸುತ್ತೇವೆ” ಎನ್ನುತ್ತ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂಬ ತಮ್ಮ ಮನವಿಗೆ ಅವರು ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯನ್ನು  ಈ ಮಹಿಳಾ ಸಂಘಟನೆಗಳು ವ್ಯಕ್ತಪಡಿಸಿವೆ..

ಎನ್‍ಎಫ್‍ಐಡಬ್ಲ್ಯು ನ ಅನ್ನಿ ರಾಜಾ, ಎಐಡಿಡಬ್ಲ್ಯುಎ ನ ಮರಿಯಮ್ ಧವಳೆ, ಎಐಪಿಡಬ್ಲ್ಯುಎ ನ  ಕವಿತಾ ಕೃಷ್ಣನ್, ಪಿಎಂಎಸ್‍ ನ ಪೂನಂ ಕೌಶಿಕ್ ಮತ್ತು ಎಐಎಂಎಸ್‍ಎಸ್‍ ನ ಛಬಿ ಮೊಹಾಂತಿ ಈ ಮನವಿಗೆ ಸಹಿ ಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *