ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ ಹಿನ್ನೆಲೆ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಪ್ರಕರಣ ದಾಖಲಾದ 6 ದಿನದ ಬಳಿಕ ಸ್ವಾಮೀಜಿಯನ್ನು ಬಂಧನ ಮಾಡಲಾಗಿದೆ. ಇಂದು ಎರಡನೇ ಆರೋಪಿ ವಾರ್ಡನ್ ರಶ್ಮಿ ಅವರ ಸತತ ವಿಚಾರಣೆ ನಡೆದ ನಂತರ ಈ ಕ್ರಮ ಕೈಕೊಳ್ಳಲಾಗಿದೆ.
ಸ್ವಾಮೀಜಿ ಬಂಧನದ ಹಿನ್ನೆಲೆಯಲ್ಲಿ ನಗರದ ಎಲ್ಲ ಕಡೆಯೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚಿನ ಭದ್ರತೆಯಾಗಿ ದಾವಣಗೆರೆಯಿಂದ ಸಿಪಿಐ ಮತ್ತು ಮೇಲಿನ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್, ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರುಗಳು ಮಠದ ಒಳಗೆ ಪ್ರವೇಶಿಸಿ, ಬಂಧನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಶ್ರೀಗಳನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಆದರೆ ಮತ್ತೊಂದು ಮಾಹಿತಿ ಪ್ರಕಾರ ಶ್ರೀಗಳನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುಲಾಗುತ್ತಿದೆ ಎಂಬ ಮಾಹಿತಿಯೂ ಮಠದ ತುಂಬಾ ಓಡಾಡುತ್ತಿದೆ.
ಘಟನೆಯ ಹಿನ್ನಲೆ : ಆಗಸ್ಟ್ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು.
ಮಠದ ಅಧೀನದಲ್ಲಿರೋ ಶಾಲಾ ಮಕ್ಕಳ ದುರ್ಬಳಕೆ ಮಾಡಿ ಶ್ರೀಗಳು ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜ.1, 2019ರಿಂದ ಜೂ.6, 2022ವರೆಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ.
ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಕೃತ್ಯ ಉಳಿದ ಆರೋಪಿಗಳು ಸಾಥ್ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಸಂತ್ರಸ್ತ ವಿದ್ಯಾರ್ಥಿನಿಯರು ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇದಾದ ನಂತರ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿತ್ತು.
ಮುರುಘಾಶ್ರೀ ವಿರುದ್ಧ ಫೋಕ್ಸೋ, ಹಾಗೂ ಅಟ್ರಾಸಿಟಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. A-3 ಮಠದ ಉತ್ತರಾಧಿಕಾರಿ (ಬಸವಾದಿತ್ಯ) , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ, A-5 ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ
ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದ A-1 ಮುರುಘಾ ಶ್ರೀ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.
A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದು, ಪ್ರಸ್ತುತ ಸಾಂತ್ವನ ಕೇಂದ್ರದಲ್ಲಿದ್ದಾರೆ.