ಚಿತ್ರದುರ್ಗ: ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಮುರುಘಾ ಮಠದ ಉತ್ತರಾಧಿಕಾರಿ ಮರಿಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುರುಘಾಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ಹೊಸಪೇಟೆಯಲ್ಲಿ ವಶಕ್ಕೆ ಪಡೆದಿದ್ದು, ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಕರೆತರಲಾಗುತ್ತಿದೆ. ಚಿತ್ರದುರ್ಗ ಗ್ರಾಮೀಣ ಠಾಣೆಗೆ ಕರೆತಂದ ನಂತರ ಬಂಧನದ ಪ್ರಕ್ರಿಯೆಯನ್ನು ಪೊಲೀಸರು ಪೂರ್ಣಗೊಳಿಸಲಿದ್ದಾರೆ.
ಪ್ರಕರಣದ ವಿವರ: ‘ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು’ ಎಂದು ವಿದ್ಯಾರ್ಥಿನೀಯರು ಆರೋಪಿಸಿದ್ದಾರೆ. ‘ನಮಗೆ ಚಿತ್ರದುರ್ಗದಲ್ಲಿ ನ್ಯಾಯ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದೇವೆ’ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಇನ್ನು ಒಡನಾಡಿ ಸಂಸ್ಥೆಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳ ಹೇಳಿಕೆ ಆಧರಿಸಿ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದಾಗ ಮಕ್ಕಳು ತಮಗಾದ ಅನುಭವವನ್ನು ಸಮಿತಿ ಮುಂದೆ ಹೇಳಿದ್ದರು.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮೈಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರುಘಾ ಶರಣರು ಸೇರಿದಂತೆ ವಸತಿ ನಿಲಯದ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಪರಮಶಿವಯ್ಯ, ವಕೀಲ ಗಂಗಾಧರಯ್ಯ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದಯಡಿ ಪ್ರಕರಣ ದಾಖಲಾಗಿದೆ. ಮುರುಘಾ ಶರಣರು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುತ್ತಿದ್ದರು. ಉಳಿದ ಆರೋಪಿಗಳು ಈ ಕೃತ್ಯಕ್ಕೆ ಸಹಕಾರ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಸ್ವಾಮಿ, ವಾರ್ಡನ್ ರಶ್ಮಿ, ಮರೀಸ್ವಾಮಿ ಬಸವಾದಿತ್ಯ ರನ್ನು ಬಂಧಿಸಲಾಗಿದೆ. ಉಳಿದ ಇಬ್ಬರಿಗೆ ಬಂಧನಕ್ಕೆ ಬಲೆ ಬೀಸಲಾಗಿದೆ.