ದೆಹಲಿ,ಫೆ.11: ಪ್ರಧಾನ ಮಂತ್ರಿಗಳು ಮೂರು ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಳ್ಳುತಿರುವಾಗಲೇ ಅವನ್ನು ರದ್ದು ಮಾಡಬೆಕೆಂಬ ರೈತರ ಹೋರಾಟದ 76 ನೇ ದಿನದಂದು ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸಂಕೇತವನ್ನು ನೀಡಿದೆ.
ಫೆಬ್ರುವರಿ 18ರಂದು ದೇಶಾದ್ಯಂತ ‘ರೈಲು ತಡೆ’ ನಡೆಸುವುದಾಗಿ ಅದು ಪ್ರಕಟಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾದ ತೀರ್ಮಾನಗಳು ಈ ಕೆಳಗಿನಂತಿವೆ.
- ಫೆಬ್ರುವರಿ 12ರಿಂದ ರಾಜಸ್ಥಾನದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಕೊಡುವುದಿಲ್ಲ, ಅವುಗಳನ್ನು ಖಾಸಗಿ ಸಂಗ್ರಹ ಏಜೆನ್ಸಿಗಳಿಂದ ಮುಕ್ತಗೊಳಿಸಬೇಕು ಎಂದೂ ರೈತ ಮುಖಂಡರು ಸಿಂಘು ಗಡಿಯಲ್ಲಿ ಪ್ರಕಟಿಸಿದ್ದಾರೆ.
- ಹರ್ಯಾಣದಶಾಸಕರು ರೈತರ ಹೋರಾಟವನ್ನು ಬೆಂಬಲಿಸಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಸಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಜೆಜೆಪಿ ಶಾಸಕರ ಘೇರಾವ್ ನಡೆಸಲು ಅಲ್ಲಿಯ ರೈತರಿಗೆ ಕರೆ ನೀಡಲಾಗಿದೆ.
- ಫೆಬ್ರುವರಿ14ರಂದು ಸೈನಿಕರನ್ನು ರೈತರ ವಿರುದ್ಧ ನಿಲ್ಲಿಸುವ ದುರುದ್ದೇಶಪೂರ್ವಕ ಪ್ರಯತ್ನಗಳನ್ನು ಖಂಡಿಸಿದ ರೈತ ಮುಖಂಡರು ಪುಲ್ವಾಮ ದಾಳಿಯ ಎರಡನೇ ವಾರ್ಷಿಕದಂದು ಹುತಾತ್ಮರಾದ ಸೈನಿಕರಿಗೆ ಮತ್ತು ರೈತರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ನಡೆಸುವಂತೆಯೂ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
- ಫೆಬ್ರುವರಿ16ರಂದು ರೈತ ಮುಖಂಡ ಸರ್ ಛೋಟೂ ರಾಮ್ ಅವರನ್ನು ಮತ್ತು ಅವರ ಪರಂಪರೆಯನ್ನು ನೆನಪಿಸಿಕೊಳ್ಳಲು ಸಭೆಗಳನ್ನು ನಡೆಸಲಾಗುವುದು.
- ಫೆಬ್ರುವರಿ18 ರಂದು ಮಧ್ಯಾಹ್ಮ 12ರಿಂದ ಸಂಜೆ 4ರ ವರೆಗೆ ದೇಶಾದ್ಯಂತ ರೈತರ ಆತಂಕವನ್ನು ವ್ಯಕ್ತಪಡಿಸಲು ರೈಲು ಸೇವೆಗಳನ್ನು ತಡೆಯಲಾಗುವದು.
ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ರೈತರು ಬೃಹತ್ ಮಹಾಪಂಚಾಯ್ತ್‍ಗಳ ಮೂಲಕ ತಮ್ಮನ್ನು ಸಂಘಟಿಸಿಕೊಳ್ಳುತ್ತಿದ್ದಾರೆ, ಇದು ಮುಂದುವರೆಯುತ್ತದೆ ಎಂದೂ ರೈತ ಮುಖಂಡರು ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರೈತ ಪ್ರಶ್ನೆಗಳನ್ನು ಚರ್ಚಿಸಲಾಗುವುದು ಮತ್ತು ಒಂದು ಇತ್ಯರ್ಥಕ್ಕೆ ಬರಲಾಗುವುದು ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಸರಕಾರ ಕಾರ್ಪೊರೇಟ್ಪರವಾಗಿ ಮೊಂಡುತನವನ್ನು ಮುಂದುವರೆಸುತ್ತಿದೆ, ಬಜೆಟ್ ಹಂಚಿಕೆಗಳನ್ನೂ ಕಡಿತಗೊಳಿಸಿರುವುದು ರೈತರನ್ನು ಸರಕಾರದ ಬಗ್ಗೆ ನಿರಾಶರಾಗಿಸಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.