- ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗೆ ಯಡಿಯೂರಪ್ಪ ಉತ್ತರ
ಮೈಸೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಮುಂದಿನ ಎರಡೂವರೆ ವರ್ಷ ತಾವೇ ಸಿಎಂ ಆಗಿರಲಿದ್ದೇನೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಎಲ್ಲ ಚರ್ಚೆಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಇತಿಶ್ರೀ ಹಾಡಿದ್ದಾರೆ.
ತಿ.ನರಸೀಪುರ ತಾಲೂಕಿನ ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಎರಡೂವರೆ ವರ್ಷ ನನಗೆ ಅವಕಾಶ ಇದೆ. ಇನ್ನು ಎರಡೂವರೆ ವರ್ಷದಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಅಪೇಕ್ಷೆ ಇದೆ ಎಂದು ಹೇಳಿ ಉಳಿದ ಅವಧಿಗೆ ನಾನೇ ಮುಖ್ಯಮಂತ್ರಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ ಒಟ್ಟು 30 ಕೋಟಿ ರೂ. ವೆಚ್ಚ ನಿಗದಿಮಾಡಲಾಗಿದೆ. ಮೊದಲ ಹಂತದಲ್ಲಿ ಹಾಗೂ 2ನೇ ಹಂತದಲ್ಲಿ 10 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಮುಂದಿನ 2 ವರ್ಷದಲ್ಲಿ ದೇವಾಲಯ ಸುಂದರ ಶೈಲಿಯಲ್ಲಿ ಪೂರ್ಣಪ್ರಮಾಣದಲ್ಲಿ ರೂಪುಗೊಳ್ಳಲಿದೆ. ದೇವಸ್ಥಾನ ಅಭಿವೃದ್ಧಿಗೆ ಹಣದ ಕೊರತೆ ಬರುವುದಿಲ್ಲ. ರಾಜ್ಯದ 136 ದೇವಸ್ಥಾನಗಳಿಗೆ ತಲಾ 1 ಕೋಟಿಯಂತೆ 136 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಯಾವುದೇ ವ್ಯಕ್ತಿಯ ಸಾಧನೆ ಮಾತನಾಡಬೇಕೆ ಹೊರತು, ಮಾತೇ ಸಾಧನೆ ಆಗಬಾರದು. ಇನ್ನೂ ಎರಡುವರೆ ವರ್ಷ ನನ್ನ ಅಧಿಕಾರ ಇದೆ. ಈ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಈ ಮೂಲಕ ಸಾಧನೆ ಮಾತನಾಡುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ಸಿಎಂ ಭೇಟಿ ನೀಡಿದ್ದು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಸುತ್ತೂರು ಮಠದ ಬಳಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಅತಿಥಿ ಗೃಹ, ಗ್ರಾಮದೇವತೆ ದೊಡ್ಡಮ್ಮ ತಾಯಿ ದೇವಸ್ಥಾನಕ್ಕೆ ಸಿಎಂ ಶಿಲಾನ್ಯಾಸ ನೆರವೇರಿಸಿದ್ದಾರೆ. ಜನಪದ ಕಲಾತಂಡಗಳು ಸಿಎಂಗೆ ಸ್ವಾಗತಿಸಿದವು.