ಹಾವೇರಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ ಮಾಡುತ್ತೇವೆ. ರಾಜ್ಯದಲ್ಲಿ ತತ್ವ ಸಿದ್ಧಾಂತಗಳಿಲ್ಲದ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ಪಕ್ಷಗಳಿವೆ ಎಂದು ರಾಜ್ಯ ರೈತಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ. ಕಿಡಿಕಾರಿದರು.
ಹಾವೇರಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಇದೇ ತಿಂಗಳು 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಪರ್ಯಾಯ ರಾಜಕಾರಣದ ಬಗ್ಗೆ ಘೋಷಣೆ ಮಾಡಲಾಗುವುದು. ಈಗಾಗಲೇ ಮಮತಾ ಬ್ಯಾನರ್ಜಿ, ದೆಹಲಿಯಿಂದ ಎಎಪಿ ಪಕ್ಷದ ಮುಖಂಡರು ಸಂಪರ್ಕ ಮಾಡಿದ್ದಾರೆ. ನಾವು ಯಾರ ಜೊತೆಗೂ ಕೈ ಜೋಡಿಸಬೇಕು ಎಂದೇನಿಲ್ಲ. ಏಪ್ರಿಲ್ 11 ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಇದೆ. ಅಂದು ಸಾಧಕ ಬಾಧಕಗಳನ್ನು ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ನಾವು ಈಗ ಸ್ವತಂತ್ರ್ಯರಾಗಿದ್ದು, ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆ. ಸಿದ್ಧಾಂತಕ್ಕೆ ದಕ್ಕೆ ಬಾರದಂತೆ ಭ್ರಷ್ಟಾಚಾರ ಮುಕ್ತವಾಗಿ ಚುನಾವಣೆ ಮಾಡುತ್ತೇವೆ ಹಾಗೂ ಗೆಲ್ಲುತ್ತೇವೆ ಕೂಡ. ಬೇರೆಯವರಂತೆ ಇಪ್ಪತ್ತು-ಮೂವತ್ತು ಕೋಟಿ ಹೆಂಡ ಇಟ್ಟುಕೊಂಡು ಚುನಾವಣೆ ಮಾಡುವುದಾದರೆ ನಾವು ಕಳ್ಳರೆ ಆಗಬೇಕಾಗುತ್ತದೆ. ಬೊಮ್ಮಾಯಿಯವರ ಶೇ.40 ರಷ್ಟು ಸರ್ಕಾರಕ್ಕೆ ನಾವು ಪರ್ಯಾಯ ಆಗುತ್ತೇವೆ ಎಂದು ತಿಳಿಸಿದರು.
ಮಾವು ಮಾರಾಟದಲ್ಲೂ ಧರ್ಮಕಾರಣ
ಮಾವು ಮಾರಾಟದಲ್ಲಿ ಹಿಂದೂ ಮುಸ್ಲಿಂ ವಿಚಾರದ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಮನಗರದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಾವು ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿ ಮಾರುಕಟ್ಟೆ ನಡೆಯುವುದೇ ಮುಸ್ಲಿಮ್ ವ್ಯಾಪಾರಸ್ಥರಿಂದ. ಅವರು ಬೆಲೆ ಸರಿಯಾಗಿ ಕೊಡುವುದಿಲ್ಲ ಅಥವಾ ಮುಸ್ಲಿಮರು ಎನ್ನುವುದು ಒಂದೇ ಟಾರ್ಗೆಟಾ? ಮುಖ್ಯಮಂತ್ರಿಯವರೇ, ಮಾವು ವಾರ್ಷಿಕ ಬೆಳೆ. ಈ ಬಾರಿ ಫಸಲು ಕಡಿಮೆ ಇದೆ. ಮಾವಿಗೆ ವೈಜ್ಞಾನಿಕ ದರ ನೀಡಿ. ಮಾವಿನ ದರ ಕಡಿಮೆಯಾದರೆ ಸರ್ಕಾರವೇ ಖರೀದಿ ಮಾಡುತ್ತೀವಿ ಎಂದು ಘೋಷಣೆ ಮಾಡಿ. ಅದು ಬಿಟ್ಟು ಇಂತಹ ಕನಿಷ್ಠವಾಗಿ ಮಾತನಾಡಬೇಡಿ. ಸರ್ಕಾರ ಜನರ ಸಂಕಷ್ಟಕ್ಕೆ ಪರಿಹಾರ ಸೂಚಿಸಬೇಕೆ ಹೊರತು ನೀವೇ ಸಮಸ್ಯೆ ಸೃಷ್ಟಿ ಮಾಡಿದಿರಿ ಎಂದು ಹೇಳಿದರು.
ಜನರು ಒಂದು-ಎರಡು ಸುಳ್ಳುಗಳನ್ನು ನಂಬುತ್ತಾರೆ. ಸುಳ್ಳು ಹೇಳುವುದೇ ನಿಮ್ಮ ಜಾಯಮಾನ ಆಗಿಬಿಟ್ಟರೆ ನಿಮ್ಮನ್ನು ಡಸ್ಟ್ ಬಿನ್‌ಗೆ ಎಸೆದುಬಿಡುತ್ತಾರೆ. ಇದರ ಬಗ್ಗೆ ಬಿಜೆಪಿಯವರಿಗೆ ಎಚ್ಚರಿಕೆ ಇರಲಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.