ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರದ ಗೆಲುವು ನಮ್ಮ ಗುರಿ: ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರು ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ʻʻಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷವನ್ನು ಗೆಲ್ಲಿಸಬೇಕು. ಅದೇ ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ 130 ಕ್ಷೇತ್ರ ಗೆಲ್ಲುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುರಿ, ನಿಮ್ಮ ಗುರಿ ಏನು ಎಂದು ಮಾಧ್ಯಮದವರು ನನಗೆ ಪ್ರಶ್ನೆ ಮಾಡಿದರು. ನಾನು ಅದಕ್ಕೆ ರಾಜ್ಯದ 224 ಕ್ಷೇತ್ರಗಳೂ ನಮ್ಮ ಗುರಿಯಾಗಿದೆಯೆಂದು ನಾನು ಸ್ಪಷ್ಟಪಡಿಸುತ್ತಿರುವೆʼʼ ಎಂದರು.

ನನ್ನ ಕ್ಷೇತ್ರದಲ್ಲಿ ಯಾರೋ ಬಿಜೆಪಿ ನಾಯಕರು ನಮ್ಮ ವಿರುದ್ಧ ಗೆಲ್ಲಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ದಳದವರು ಪ್ರಯತ್ನಿಸಿದರೂ ಆಗಲಿಲ್ಲ. ಹಾಗಂತ ನಾವು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಗಳ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡಲು ಸಾಧ್ಯವೇ? ಅಲ್ಲಿ ನಾವ್ಯಾಕೆ ಗೆಲ್ಲಬಾರದು? ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ 224 ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಇವತ್ತಿನಿಂದ ಇಲ್ಲಿ, ಹಳಬರು, ಹೊಸಬರು ಎಂಬ ಪ್ರಶ್ನೆ ಇಲ್ಲ. ಕಾಂಗ್ರೆಸ್ ದೇವಾಲಯಕ್ಕೆ ಬಂದು ಪಕ್ಷ ಸೇರಿರುವುದು ನಿಮ್ಮ ಭಾಗ್ಯ. ನಿಮ್ಮೆಲ್ಲರನ್ನೂ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ದೇವನಹಳ್ಳಿ ಕ್ಷೇತ್ರ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ದೇವನಹಳ್ಳಿ ಮುಖಂಡರಾದ ಚಿದಾನಂದ, ಶ್ರೀಮತಿ ತುಂಗಭದ್ರಾ, ನಾಗರಾಜ್, ಮಂಜುನಾಥ್, ದೇವರಾಜ್, ಚೊಕ್ಕರೆಡ್ಡಿ, ರವಿ, ಬಸವರಾಜ್, ಪಿಳ್ಳಪ್ಪ, ಮುರಳೀಧರ ಮತ್ತಿತರ ನೂರಾರು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕ ಮುನಿನರಸಿಂಹಯ್ಯ, ಚನ್ನಪ್ಪ, ತೂಬಗೆರೆ ರಂಗಪ್ಪ, ಶಾಂತರಾಜು ಮತ್ತಿತರ ಮುಖಂಡರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *