ಬೆಂಗಳೂರು: ನಾವು ಕಡುಬು ಕಡಿದುಕೊಂಡು ಕೂರುವುದಿಲ್ಲ. ಕೋವಿಡ್ 3ನೇ ಅಲೆ ಕಡಿಮೆಯಾಗಲಿ ಎಂದು ಕಾಯುತ್ತಿದ್ದೇವೆ. ಜೆಡಿಎಸ್ ಗಟ್ಟಿಯಾಗಿ ಬೆಳೆಯಲಿದೆ. ಈಗಿನ ರಾಜಕಾರಣದಲ್ಲಿ ನಿಷ್ಠೆಯಿಲ್ಲ. ಅಧಿಕಾರ ಎಂಬುದೇ ಎಲ್ಲರಿಗೂ ಸಿದ್ದಾಂತವಾಗಿದೆ. ಯಾವ ಪಕ್ಷದಲ್ಲೂ ಸಿದ್ದಾಂತ ಉಳಿದಿಲ್ಲ. ನಮಗೆ ಯಾವುದೇ ರೀತಿಯ ಆತಂಕವಿಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟು ಏನು ನಡೆಯುವುದಿಲ್ಲ. ಆಗ ನಮ್ಮ ಶ್ರಮ ಕಾಣುತ್ತದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಕೊಡುಗೆ ಏನು ಎಂಬುದನ್ನು ಪ್ರಸ್ತಾಪಿಸಿ ಅಲ್ಲಿಂದಲೇ ಜೆಡಿಎಸ್ ಹೋರಾಟ ಆರಂಭಿಸುವುದಾಗಿ ಹೇಳಿದರು.
ಹಳಬರನ್ನು ಮತ್ತೆ ಪಕ್ಷಕ್ಕೆ ಕರೆತರುವ ಉದ್ದೇಶ ಇಲ್ಲ. ಹೊಸ ನಾಯಕತ್ವದ ಚಿಂತೆಯಲ್ಲಿದ್ದೇವೆ. ಯುವಕರು ಮುಂದೆ ಬರುತ್ತಿದ್ದಾರೆ. ವಿಧಾನಸಭೆ ಚುನಾವಣೆಗೂ ಮುಂಚೆ 7-8 ತಿಂಗಳು ಜನರಲ್ಲಿ ಪರಿವರ್ತನೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.
ಬಿಜೆಪಿಯ ದೊಡ್ಡ ಮಟ್ಟದ ದಂಡೇ ಕಾಂಗ್ರೆಸ್ ಸಂಪರ್ಕದಲ್ಲಿದೆ ಎಂದು ಹೇಳುವ ನಾಯಕರು ಬಿಜೆಪಿಯ ಬಾಲಂಗೋಚಿ ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಪ್ರಶ್ನಿಸಿದರು.
ಆಂತರಿಕವಾಗಿ ಒಪ್ಪಂದವನ್ನು ಯಾರ ಪಕ್ಷದಲ್ಲಿ ಯಾರು ಮಾಡಿಕೊಂಡಿದ್ದಾರೆ ಎಂಬುದನ್ನು ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಹೇಳಬೇಕು. ಸಿದ್ದರಾಮಯ್ಯ ಅವರು ಜೆಡಿಎಸ್ನ್ನು ಬಿಜೆಪಿಯ ಬಾಲಂಗೋಚಿ ಎಂದು ಜರಿದಿದ್ದಾರೆ. ಯಾರು ಯಾರ ಬಾಲಂಗೋಚಿ ಎಂಬುದನ್ನು ಹೇಳಬೇಕು. ಪಕ್ಷ ತೊರೆದು ಹೋಗಲಿದ್ದಾರೆ ಎಂಬ ಮಾಹಿತಿಯಿಂದ ನಮಗೇನೂ ಗಾಬರಿ, ಆತಂಕ ಇಲ್ಲ. ನಮ್ಮದು ಸಣ್ಣ ಪಕ್ಷ, ಯುವಕರು ಹೆಚ್ಚಾಗಿದ್ದಾರೆ.ಕ್ಷೇತ್ರದ ಕೆಲಸಕ್ಕಾಗಿ ಮುಖ್ಯಮಂತ್ರಿ, ಸಚಿವರೊಂದಿಗೆ ನಮ್ಮ ಶಾಸಕರು ಸಂಪರ್ಕದಲ್ಲಿರಬಹುದು. ಹಳೆಯ ನಾಯಕರೆಂದು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿರಬಹುದು. ಇದಕ್ಕೆ ಏಕೆ ಅನುಮಾನ ಪಡಬೇಕು. ರಾಜಕಾರಣದಲ್ಲಿ ಶತ್ರುಗಳು, ಮಿತ್ರರು ಎಂಬುದು ಇರುವುದಿಲ್ಲ.
ಸಿದ್ದರಾಮಯ್ಯನವರು ಜೆಡಿಎಸ್ನಲ್ಲಿ ಇದ್ದಾಗಲೂ ಶೇ.19ರಷ್ಟು ಮತಗಳು ಬರುತ್ತಿದ್ದವು. ಅವರು ಬಿಟ್ಟಾಗಲು ಅಷ್ಟೇ ಪ್ರಮಾಣದ ಮತಗಳು ಬರುತ್ತಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ 2004ರಲ್ಲಿ ಜೆಡಿಎಸ್ 58 ಸ್ಥಾನಗಳನ್ನು ಗಳಿಸಿತ್ತು. ಆಗ ಸಿದ್ದರಾಮಯ್ಯ ಒಬ್ಬರದೇ ಶ್ರಮ ಇರಲಿಲ್ಲ. ನಮ್ಮ ಶ್ರಮವೂ ಇತ್ತು.
ಕಾಂಗ್ರೆಸ್ ನಾಯಕರನ್ನು ಮುಗಿಸುವ ಉದ್ದೇಶದಿಂದ ಮೊದಲ ಆಪರೇಷನ್ ಕಮಲದ ಉಪಚುನಾವಣೆ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿಯಿಂದ ಯಾರನ್ನು ಕಳುಹಿಸಿ ಹಣ ಪಡೆದಿದ್ದರು ಎಂಬುದು ಗೊತ್ತಿದೆ. ಅರ್ಕಾವತಿ ಕರ್ಮಕಾಂಡವೊಂದು ಬಿಜೆಪಿಯವರು ಮಾಡಿದ್ದಾರೆ ಎನ್ನಲಾದ ಲೂಟಿಗೆ ಸರಿಸಮವಲ್ಲ ಎಂದು ಆರೋಪಿಸಿದರು.
ಭತ್ತ, ರಾಗಿ ಖರೀದಿಗೆ ಮಿತಿ ಹೇರುವುದು ಅವೈಜ್ಞಾನಿಕ. ಕೇವಲ ಜಾಹೀರಾತಿನಿಂದ ಚುನಾವಣೆ ನಡೆಸಲು ಆಗುವುದಿಲ್ಲ. ಯಾವುದೇ ಕಾರಣಕ್ಕೂ ಖರೀದಿ ಕೇಂದ್ರಗಳನ್ನು ನಿಲ್ಲಿಸಬಾರದು. ಕರ್ನಾಟಕ ದುಸ್ಥಿತಿಗೆ ಬರಲು ಎರಡು ರಾಷ್ಟ್ರೀಯ ಪಕ್ಷಗಳು ಕಾರಣ ಎಂದು ಆರೋಪಿಸಿದರು.