ಮುಂಬೈ | ಕ್ಯಾಮೆರಾ ಮುಂದೆಯೆ ಶಿವಸೇನೆ (ಉದ್ಧವ್ ಬಣ) ನಾಯಕನ ಗುಂಡಿಕ್ಕಿ ಹತ್ಯೆ

ಮುಂಬೈ: ಶಿವಸೇನೆ (ಯುಬಿಟಿ) ನಾಯಕ ಅಭಿಷೇಕ್ ಘೋಸಲ್ಕರ್ ಅವರು ತಮ್ಮ ರಾಜಕೀಯ ಕಾರ್ಯದ ಬಗ್ಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುತ್ತಿದ್ದಾಗ ಕ್ಯಾಮೆರಾ ಮುಂದೆಯೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಘಟನೆ ಗುರುವಾರ ಸಂಜೆ ನಡೆದಿದ್ದು, ದುಷ್ಕರ್ಮಿ ಅವರ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಘಟನೆ ನಂತರ ದುಷ್ಕರ್ಮಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಮುಂಬೈನ ಉಪನಗರದಲ್ಲಿರುವ ಬೊರಿವಲಿಯ ಐಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ದಾಳಿಕೋರನನ್ನು ಮೋರಿಸ್ ನೊರೊನ್ಹೋ ಎಂದು ಪೊಲೀಸರು ಗುರುತಿಸಿದ್ದಾರೆ. ಅಭಿಷೇಕ್ ಘೋಸಲ್ಕರ್ ಅವರನ್ನು ಉತ್ತರ ಮುಂಬೈನ ಹತ್ತಿರದ ಕರುಣಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಶಿವಸೇನೆ

ಇದನ್ನೂ ಓದಿ: ಪ್ರತಿಭಟನೆಗೆ ಬೆದರಿ ದೆಹಲಿ-ನೋಯ್ಡಾ ಗಡಿ ಬಂದ್ | ರೈತರ ಭೇಟಿಗೆ ಒಪ್ಪಿದ ಕೇಂದ್ರ ಸರ್ಕಾರ

ದುಷ್ಕರ್ಮಿ ನೊರೊನ್ಹೋ ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಲೈವ್‌ನಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡಲು ಅಭಿಷೇಕ್ ಘೋಸಲ್ಕರ್ ಅವರನ್ನು ಕೇಳಿದ್ದಾರೆ. ಮಾತು ಮುಗಿದ ತಕ್ಷಣ ಮತ್ತು ಅಭಿಷೇಕ್ ಘೋಸಲ್ಕರ್ ಹೊರಡಲು ಎದ್ದ ತಕ್ಷಣ ನೊರೊನ್ಹೋ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಕಚೇರಿಯ ಮೇಲ್ಛಾವಣಿಯ ಮೇಲೆ ಹೋಗಿ ಪಿಸ್ತೂಲ್‌ಗೆ ಗುಂಡು ತುಂಬಿಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೃತ್ಯ ನಡೆದ ಸ್ಥಳದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಮಾಜಿ ಶಾಸಕ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್ ಮಾಜಿ ಕಾರ್ಪೊರೇಟರ್ ಆಗಿದ್ದರು. ಅವರ ತಂದೆ ವಿನೋದ್ ಅವರು 2009-2014 ಅವಧಿಗೆ ದಹಿಸರ್ ಪ್ರದೇಶದಿಂದ ಶಾಸಕರಾಗಿದ್ದರು. ಮೃತ ನೊರೊನ್ಹೋ ವಿರುದ್ಧ ಐಪಿಸಿಯ ಸೆಕ್ಷನ್ 302, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 25, ಸೆಕ್ಷನ್ 37 (1) (ಎ), ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸದ ವೇಳೆ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ

ಆರಂಭದಲ್ಲಿ 15 ಕಾರ್ಟ್ರಿಡ್ಜ್ ಸಾಮರ್ಥ್ಯದ ಪಿಸ್ತೂಲ್‌ನಿಂದ ಐದು ಸುತ್ತು ಗುಂಡು ಹಾರಿಸಲಾಗಿದೆ. ಅದರಲ್ಲಿ ನಾಲ್ಕು ಗುಂಡುಗಳು ಅಭಿಷೇಕ್‌ ಘೋಸಲ್ಕರ್‌ಗೆ ತಗುಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೊರೊನ್ಹೋ ತನ್ನ ಖಾಸಗಿ ಅಂಗರಕ್ಷಕ ಮಿಶ್ರಾ ಅವರ ಪರವಾನಗಿ ಪಡೆದ ಪಿಸ್ತೂಲ್ ಅನ್ನು ಬಳಸಿದ್ದಾರೆ ಎಂದು ನಂಬಲಾಗಿದೆ. ತನಿಖೆಯನ್ನು ಶುಕ್ರವಾರ ಮುಂಬೈ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ.

”ಅಪರಾಧ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಈ ಇಬ್ಬರ ನಡುವೆ ಕೆಲವು ರೀತಿಯ ಪೈಪೋಟಿ ಇದ್ದಂತೆ ತೋರುತ್ತಿದ್ದು, ಅದೇ ಕಾರಣಕ್ಕೆ ಹತ್ಯೆ ನಡೆದಿರಬಹುದು” ಎಂದು ಅಪರಾಧ ವಿಭಾಗ ಡಿಸಿಪಿ ರಾಜ್ ತಿಲಕ್ ರೌಶನ್ ಎಎನ್‌ಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅವರ ಪೈಪೋಟಿಯನ್ನು ನಿಲ್ಲಿಸಲು ಮತ್ತು ತಮ್ಮ ಅನುಯಾಯಿಗಳಿಗೆ ತಾವಿಬ್ಬರೂ ಒಟ್ಟಿಗೆ ಇದ್ದೇವೆ ಎಂದು ತಿಳಿಸಲು ಫೇಸ್‌ಬುಕ್ ಲೈವ್ ಅನ್ನು ಆಯೋಜಿಸಲಾಗಿತ್ತು ಎಂದು ಹೇಳಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ (ಯುಬಿಟಿ) ಶಾಸಕ ಮತ್ತು ಮಾಜಿ ಸಚಿವ ಆದಿತ್ಯ ಠಾಕ್ರೆ, “ರಾಜ್ಯದಲ್ಲಿ ಗೂಂಡಾಗಳ ಸರ್ಕಾರವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ಮೊದಲು ಕಲ್ಯಾಣ್‌ನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈಗ ಮುಂಬೈನಲ್ಲಿ ಫೈರಿಂಗ್ ನಡೆದಿದೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *