ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಜೂನ್ 25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗುತ್ತದೆಯೇ? ಇಲ್ಲವೇ ಎಂಬ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮೇ 29ರಂದು ರಜಾ ಅಕಾಡೆಮಿ ಮುಂಬೈ ವಿಭಾಗದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಪೈಡೋನಿ ಪೊಲೀಸ್ ಠಾಣೆಗೆ ನೂಪುರ್ ಶರ್ಮಾ ವಿರುದ್ಧ ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ, ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈಗಾಗಲೇ, ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ ನೂಪುರ್ ಶರ್ಮಾ ವಿರುದ್ಧ ದೂರು ದಾಖಲಾಗಿದೆ. ಭಿವಾಂಡಿ ಪೊಲೀಸರು ಸಹ ಠಾಣೆ ಹಾಜರಾಗುವಂತೆ ಆದೇಶಿಸಿದ್ದಾರೆ. ಭೋಯಿವಾಡ ಪೊಲೀಸರು ಸಹ ಆದೇಶ ನೀಡಿದ್ದು, ನೂಪುರ್ ಶರ್ಮಾ ಹಾಜರಾಗುವ ದಿನಾಂಕ ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮುಂಗ್ರಾ ಠಾಣೆ ಆದೇಶದಂತೆ ಜೂನ್ 22ರಂದು ಹಾಜರಾಗುವಂತೆ ತಿಳಿಸಲಾಗಿದೆ.
ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕಳೆದೆರಡು ದಿನಗಳಲ್ಲಿ ಪ್ರತಿಭಟನೆಯ ಸ್ವರೂಪಾ ಹಿಂಸ್ಮಾತಕಕ್ಕೆ ತಿರುಗಿದ್ದರೂ ನೂಪುರ್ ಶರ್ಮಾ ಅವರನ್ನು ಈವರೆಗೂ ಪೊಲೀಸರು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಶಾಂತಿ ಸೌಹಾರ್ದತೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವವರ ಮೇಲೆ ಬಿಜೆಪಿ ಪಕ್ಷ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ, ಇಂಥವರ ವಿರುದ್ಧ ಕಾನೂನು ಪ್ರಕಾರವಾಗಿ ಬಂಧನವಾಗಬೇಕು. ಆದರೆ ಪೊಲೀಸರು ಏಕೆ ಬಂಧಿಸುತ್ತಿಲ್ಲ. ಕನಿಷ್ಠ ಕಾನೂನು ಕ್ರಮ ಕೂಡ ಜರುಗಿಸದಿರುವುದು ಚರ್ಚೆಗೆ ಒಳಪಟ್ಟಿದೆ.
ಇದರೊಂದಿಗೆ, ನೂಪುರ್ ಶರ್ಮಾ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ದೀರ್ಘಕಾಲಿನ ದಿನವನ್ನು ನಿಗದಿಪಡಿಸಿರುವ ಬಗ್ಗೆಯೂ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ
ಬಿಜೆಪಿ ವಕ್ತಾರೆಯಾಗಿದ್ದ 37 ವರ್ಷದ ನೂಪುರ್ ಶರ್ಮಾ ವಾರಣಾಸಿ ಜ್ಞಾನವಾಪಿ ಮಸೀದಿ ಕುರಿತ ಖಾಸಗಿ ಸುದ್ದಿ ವಾಹಿಯಲ್ಲಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಆಕೆ ನೀಡಿದ ಹೇಳಿಕೆ ವಿವಾಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷ ಈಗಾಗಲೇ ನೂಪುರ್ ಶರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಅರಬ್ ರಾಷ್ಟ್ರಗಳು ಸಹ ಭಾರತದ ಆಡಳಿತ ಪಕ್ಷದ ವಕ್ತಾರೆ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿವೆ. ಸೌದಿ ಅರೇಬಿಯಾ, ಬಹ್ರೇನ್, ಅರಬ್ ಸಂಯುಕ್ತ ಸಂಸ್ಥಾನ, ಇಂಡೊನೇಷ್ಯಾ, ಜೋರ್ಡನ್ ಸೇರಿದಂತೆ ವಿವಿಧ ರಾಷ್ಟ್ರಗಳು ನೂಪುರ್ ಶರ್ಮಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದವು.
ನೂಪುರ್ ಶರ್ಮಾ ತಮಗೆ ಮತ್ತು ಕುಟುಂಬ ಸದಸ್ಯರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೆಹಲಿ ಪೊಲೀಸರು ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡಿದ್ದಾರೆ.