ಮುಂಬೈ: ಮುಂಬೈ ನಗರವನ್ನು ಸ್ಪೋಟಗೊಳಿಸುವುದಾಗಿ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಕಳುಹಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದು, ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾದ ಬೆದರಿಕೆ ಸಂದೇಶವನ್ನು ಪೊಲೀಸರು ನೋಡಿದ್ದಾರೆ. “ನಾನು ಶೀಘ್ರದಲ್ಲೇ ಮುಂಬೈಯನ್ನು ಸ್ಫೋಟಿಸಲಿದ್ದೇನೆ” ಎಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಬರೆಯಲಾಗಿತ್ತು. ಪೊಲೀಸರು ಸಂಬಂಧಪಟ್ಟ ವ್ಯಕ್ತಿಯ ಖಾತೆಯನ್ನು ತನಿಖೆ ಮಾಡಲು ಪ್ರಾರಂಭಿಸಿದ್ದು, ಆತನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿಗೆ ಬಾಂಬ್ ಬೆದರಿಕೆ ಕರೆ : ಶಾಲೆಗೆ ಇ-ಮೇಲ್, ಠಾಣೆಗೆ ಕರೆ ಮಾಡಿ ಭಯ ಸೃಷ್ಟಿಸಿದ ದುರುಳರು
ಇಲ್ಲಿಯವರೆಗೆ ಪೊಲೀಸರಿಗೆ ಬೆದರಿಕೆ ಕರೆಗಳು ಫೋನ್ ಕರೆ ಇಲ್ಲವೇ ಇ-ಮೇಲ್‌ಗಳ ಮೂಲಕ ಬರುತ್ತಿದ್ದವು. ಇದೀಗ ಕಿಡಿಗೇಡಿಯೊಬ್ಬ ಮುಂಬೈ ಪೊಲೀಸರ ಟ್ವಿಟ್ಟರ್ ಖಾತೆಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಇದು ಪೊಲೀಸರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಮಹಾರಾಷ್ಟ್ರದಲ್ಲಿ ಇಂತಹ ಬೆದರಿಕೆ ಕರೆಗಳು ಬರುತ್ತಿರುವುದು ಇದೇ ಮೊದಲೇನು ಅಲ್ಲ. ಮಹಾರಾಷ್ಟ್ರದ ಪುಣೆಯ ಕೋರೆಗಾಂವ್ ಉದ್ಯಾನವನದ ವಾಣಿಜ್ಯ ಸಂಕೀರ್ಣದಲ್ಲಿರುವ ಗೂಗಲ್ ಕಚೇರಿಯಲ್ಲಿ ಸ್ಫೋಟಕ ಸಾಧನವಿದೆ ಎಂದು ವ್ಯಕ್ತಿಯೊಬ್ಬ ಫೆಬ್ರವರಿ ತಿಂಗಳಲ್ಲಿ ಭಾನುವಾರ ರಾತ್ರಿ ಕರೆ ಮಾಡಿದ್ದ. ಈ ಹಿನ್ನೆಲೆ, ಪುಣೆ ಪೊಲೀಸ್ ತಂಡಗಳು ಮತ್ತು ಬಾಂಬ್ ಪತ್ತೆ ಹಾಗೂ ವಿಲೇವಾರಿ ತಂಡಗಳು (ಬಿಡಿಡಿಎಸ್) ತಡರಾತ್ರಿ ಬಂದ ಈ ಕರೆ ಹಿನ್ನೆಲೆ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಬಾಂಬ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಹಿನ್ನೆಲೆ ಗೂಗಲ್ ಕಚೇರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.