ಕಲ್ಬುರ್ಗಿ: ರಾಜ್ಯದ ವಿವಿಧ 40ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ ಜ.17, 18 ಮತ್ತು 19 ರಂದು ಮೂರು ದಿನಗಳ ಕಾಲ ಭಾರತದ ಬಹುತ್ವದ ಸಂಸ್ಕೃತಿ ಪ್ರತಿಪಾದನೆ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ -2025ರ ಕಲಬುರಗಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವದ ಸಂಚಾಲಕರಾದ ಮೀನಾಕ್ಷಿ ಬಾಳಿ, ಆರ್.ಕೆ.ಹುಡಗಿ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹುಸಂಸ್ಕೃತಿಯು ಭಾರತದ ಹೆಗ್ಗುರುತು. ವೈವಿಧ್ಯತೆಯಲ್ಲಿ ಏಕತೆ ಭಾರತದ ವಿಶಿಷ್ಟತೆ. ಇಂತಹ ಬಹುತ್ವ ಭಾರತದ ಮೇಲೆ ವೈದಿಕ ಧಾರ್ಮಿಕತೆಯ ಯಜಮಾನಿಕೆಯ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನಗಳು ನಡೆಯುತ್ತಿರುವುದು ಇದೀಗ ಎದ್ದು ಕಾಣುತ್ತಿದೆ ಎಂದರು.ಕಲ್ಬುರ್ಗಿ
ನೆಲಮೂಲ ಸಂಸ್ಕ್ರತಿಗಳನ್ನು ತುಳಿದಿಕ್ಕಿ, ವೈಧಿಕ ಧಾರ್ಮಿಕತೆಯನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸುವ ಹುನ್ನಾರಗಳನ್ನು ವಿರೋಧಿಸಿ ‘ಬಹುತ್ವ ಭಾರತ, ಸಶಕ್ತ ಭಾರತ’ ಎನ್ನುವ ಪ್ರತಿಪಾದನೆಯಲ್ಲಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ವನ್ನು ಇದೇ 2025 ಜನವರಿ 17 ರಿಂದ 19 ರವರೆಗೆ ಕಲ್ಬುರ್ಗಿ ಮಹಾನಗರದಲ್ಲಿ ಆಯೋಜಿಸಲಾಗುತ್ತಿದೆ. ಸುಮಾರು ನಲವತ್ತಕ್ಕೂ ಅಧಿಕ ವಿವಿಧ ಜನ ಸಂಘಟನೆಗಳು ಒಡಗೂಡಿದ ‘ಸೌಹಾರ್ದ ಕರ್ನಾಟಕ’ ವು ವ್ಯವಸ್ಥೆಗೊಳಿಸುತ್ತಿದೆ ಎಂದರು.
ಕರ್ನಾಟಕ ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಗಳು ಕೋಮು ಸೌಹಾರ್ದತೆ, ಸಾಮರಸ್ಯ ಸಂಸ್ಕೃತಿಯ ನೆಲೆವೀಡಾಗಿದೆ. ಆಚಾರ, ವಿಚಾರ, ಹಬ್ಬ, ಸಾಮಾಜಿಕ ಧಾರ್ಮಿಕ ಉತ್ಸವಗಳಲ್ಲಿ, ಜನ ಜೀವನದಲ್ಲಿಯೂ ಇವು ಹಾಸು ಹೊಕ್ಕಾಗಿವೆ. ಶರಣ ಬಸಪ್ಪ ಅಪ್ಪ ದೇವಸ್ಥಾನ – ಖಾಜಾ ಬಂದೇ ನವಾಜ ದರ್ಗಾ, ತಿಂತಿಣಿ ಮೌನೇಶ್ವರ, ಚಾಂಗಿದೇವ, ಶಿಶುನಾಳ ಶರೀಫ-ಗುರು ಗೋವಿಂದ ಭಟ್ಟ, ಬಾಬಾ ಬುಡನ್ ದರ್ಗಾ ದತ್ತಪೀಠ, ಮುಂತಾದ ಶರಣರು, ಸೂಫಿ ಸಂತರು, ತತ್ವ ಪದಕಾರರ ಪರಂಪರೆ ಉಜ್ವಲವಾದುದು. ಜಾತಿ ತಾರತಮ್ಯ, ಲಿಂಗ ತಾರತಮ್ಯ ವಿರೋಧಿಸಿದ, ಎಲ್ಲ ರೀತಿಯ ಅಸಮಾನತೆಗಳನ್ನು ತೊಲಗಿಸಲು ಪಣ ತೊಟ್ಟಿದ್ದ 12 ನೆಯ ಶತಮಾನದ ಕಾಯಕ ಜೀವಿ ಶರಣರ ಮಹಾನ್ ಚಳುವಳಿ ನಡೆದ ಪ್ರದೇಶವಿದು. ಇಂತಹ ಪ್ರದೇಶದಲ್ಲಿ ವಚನ ಚಳುವಳಿಗೆ, ಶರಣರ ಪರಂಪರೆಗೆ ಮಸಿ ಬಳಿಯುವ ಪ್ರಯತ್ನಗಳೂ ನಡೆದಿವೆ. ವಚನ ಚಳುವಳಿಯನ್ನು ಅನ್ಯಾಯ, ಅಸಮಾನತೆಗಳ ಅಡಿಪಾಯವಾಗಿರುವ ವೈಧಿಕ ತತ್ವಗಳೊಂದಿಗೆ ಸಮೀಕರಿಸುವ, ಅದರ ಮುಂದುವರೆದ ಭಾಗ ಎನ್ನುವ ವಿಕೃತ ಪ್ರತಿಪಾದನೆಗಳು ಆರಂಭಗೊಂಡಿವೆ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ವೈವಿಧ್ಯತೆಯ ಸಂಸ್ಕೃತಿಯನ್ನೇ ಅಪೋಶನ ಮಾಡುವ ಕುತಂತ್ರಗಳನ್ನು ಎದುರಿಸಿ ಹಿಮ್ಮೆಟ್ಟಿಸುವುದು ಇಂದಿನ ಜರೂರಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ವಚನ ಚಳುವಳಿಯ ಮೂಲ ಆಶಯಗಳನ್ನು ಹಾಗೂ ಸಮಾಜದ ಸೌಹಾರ್ದ ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಾನಾ ಧಾರ್ಮಿಕ, ಸಾಮಾಜಿಕ ಸಂಘಟನೆಗಳೂ, ವ್ಯಕ್ತಿಗಳೂ ಕೂಡಿ ಕಲ್ಬುರ್ಗಿಯಲ್ಲಿ ಜನವರಿ 17 ರಿಂದ 19, 2025 ರವರೆಗೆ ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದರು.ಕಲ್ಬುರ್ಗಿ
ಇದನ್ನೂ ನೋಡಿ : ಬಸವಣ್ಣನವರ ಪ್ರತಿಮೆ ವಿರೂಪ; 2 ಗಂಟೆ ಭಾಲ್ಕಿ-ಹುಮನಾಬಾದ್ ಹೆದ್ದಾರಿ ಸಂಚಾರ ಸ್ಥಗಿತ
ಕಾರ್ಯಕ್ರಮಗಳ ವಿವರ
ಬಹುತ್ವ ಸಂಸ್ಕೃತಿ ಭಾರತೋತ್ಸವ -2025
ದಿನಾಂಕ. 17-19 ಜನವರಿ 2025 ರವರೆಗೆ ಮೂರು ದಿನಗಳ ಕಾರ್ಯಕ್ರಮ
ದಿನಾಂಕ 17-1-2025 ಸಮಯ-ಮುಂಜಾನೆ 10-30ಕ್ಕೆ
ಸೌಹಾರ್ದ ಸಾಂಸ್ಕೃತಿಕ ಜಾಥಾ
ಉದ್ಘಾಟನೆ :
ದ್ರಾಕ್ಷಾಯಿಣಿ ಶರಣಬಸಪ್ಪ ಅಪ್ಪ, ಶ್ರೀಶರಣಬಸವೇಶ್ವರ ಮಹಾಸಂಸ್ಥಾನ, ಕಲಬುರಗಿ.
ಮುಖ್ಯ ಅತಿಥಿಗಳು: ಪ್ರೊ. ಸಬಿಹಾ ಭೂಮಿಗೌಡ
ನಿವೃತ್ತ ಕುಲಪತಿಗಳು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಜಾಥಾವು ಮುಂಜಾನೆ 10-30 ಕ್ಕೆ ಶ್ರೀಶರಣಬಸವೇಶ್ವರ ದೇವಸ್ಥಾನದಿಂದ ಹೊರಟು ಸೇಂಟ್ ಮೇರಿ ಚರ್ಚ್ ಮಾರ್ಗವಾಗಿ ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಮಹಾತ್ಮ ಬಸವೇಶ್ವರ ವೃತ್ತ ಜಗತ್ ದಿಂದ ಹಾಯ್ದು ಕೊನೆಗೆ ಖ್ವಾಜಾ ಬಂದಾ ನವಾಜ್ ದರ್ಗಾದಲ್ಲಿ ಸಮಾವೇಶಗೊಳ್ಳುತ್ತದೆ. ದರ್ಗಾದ ಸಜ್ಜಾದೆಯವರ ಶುಭ ಸಂದೇಶದಿಂದ ಸಂಪನ್ನಗೊಳ್ಳುತ್ತದೆ.
ದಿನಾಂಕ 18-1-2025 ರಂದು ಮುಂಜಾನೆ 10-30 ಕ್ಕೆ ಕಲಬುರಗಿ ನಗರದ ಪಂಡಿತ ರಂಗಮಂದಿರದಲ್ಲಿ ದಿನವಿಡೀ ತತ್ವಪದ, ವಚನ,ಖವ್ವಾಲಿ, ಕ್ರಾಂತಿಗೀತೆಗಳ ಗಾಯನ ಗೋಷ್ಠಿ ನಡೆಯುತ್ತದೆ.
ದಿನಾಂಕ19-1-2025 ರಂದು ಮುಂಜಾನೆ 10-30ಕ್ಕೆ ಕನ್ನಡ ಭವನದಿಂದ ಮೆರವಣಿಗೆ ಹೊರಟು ಜಗತ್ ವೃತ್ತಕ್ಕೆ ತಲುಪುತ್ತದೆ. ಮದ್ಯಾಹ್ನ 11-30 ಕ್ಕೆ ಬಹಿರಂಗ ಅಧಿವೇಶನ.
ಅಧಿವೇಶನದಲ್ಲಿ ಪಂಡಿತಾರಾಧ್ಯ ಸ್ವಾಮೀಜಿಗಳು, ಸಾಣೇಹಳ್ಳಿ, ಸಿದ್ದರಾಮ ಶಿವಯೋಗಿಗಳು, ಗದಗ, ಮಘಚ ಬಸವಲಿಂಗ ಪಟ್ಟದ್ದೇವರು, ಭಾಲ್ಕಿ, ಗುರುಮಹಾಂತ ಸ್ವಾಮಿಗಳು, ಇಲಕಲ್, ಜ್ಞಾನಪ್ರಕಾಶ ಸ್ವಾಮಿಗಳು -ಮೈಸೂರು, ಪೂಜ್ಯ ನಿಜಗುಣಾನಂದ ಸ್ವಾಮಿಗಳು ಬೈಲೂರು, ಮಾತೆ ಗಂಗಾಂಬಿಕೆ ಪಾಟೀಲ, ದ್ರಾಕ್ಷಾಯಿಣಿ ಅಪ್ಪ, ಶರಣಬಸವೇಶ್ವರ ಸಂಸ್ಥಾನ, ಹಜರತ್ ಖ್ವಾಜಾ ಬಂದಾನವಾಜ್ ಗೇಸುದರಾಜ್, ಸಂಗಾನಂದ ಭಂತೇಜಿ, ಖಾದ್ರಿ ಮುಸ್ತಾಫ್, ಮಳಖೇಡ ದರ್ಗಾ ಫಾದರ್ ಲೋಬೋ, ಸೇಂಟ್ ಮೇರಿ ಚರ್ಚ್, ಗುರುಮೀತ್ ಸಿಂಗ್ , ಜ್ಞಾನಜ್ಯೋತಿ ಭಂತೇಜಿ, ಚೆನ್ನಬಸವ ಸ್ವಾಮಿಜೀ ಹಾಗೂ ಚಿಂತಕರಾದ ಪ್ರೊ. ಟಿ. ಆರ್. ಚಂದ್ರಶೇಖರ, ದಿನೇಶ ಅಮಿನಮಟ್ಟು, ಎಸ್ ಜಿ ಸಿದ್ಧರಾಮಯ್ಯ, ಎಸ್. ಎಂ. ಜಾಮದಾರ, ರಹಮತ್ ತರಿಕೇರೆ, ರಂಜಾನ್ ದರ್ಗಾ, ಕೆ. ಎಸ್. ವಿಮಲಾ, ನಟರಾಜ ಬೂದಾಳು, ಜಗದೀಶ ಪಾಟೀಲ, ಬಸವರಾಜ ಸೂಳಿಭಾವಿ, ಮುನಿರ ಕಾಟಿಪಳ್ಳ, ಡಾ. ಎಸ್. ವೈ. ಗುರುಶಾಂತ, ಜಿ. ಎನ್. ನಾಗರಾಜ್, ಆರ್. ರಾಮಕೃಷ್ಣ., ಪ್ರೊ.ಆರ್. ಕೆ. ಹುಡಗಿ, ಕಾಶಿನಾಥ ಅಂಬಲಗೆ, ನೀಲಾ ಕೆ, ಪ್ರಭುಲಿಂಗ ಮಹಾಗಾಂವಕರ್, ಆರ್. ಜಿ. ಶೆಟಗಾರ್, ಶ್ರೀಶೈಲ ಮಸೂತಿ, ಬಿ.ರಾಜಶೇಖರಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಸೌಹಾರ್ದ ಸಂಸ್ಕೃತಿ ಉತ್ಸವದಲ್ಲಿ ನಾಡಿನ ಎಲ್ಲರೂ ಭಾಗವಹಿಸಬೇಕೆಂದು, ಅದರಲ್ಲೂ ಜನವರಿ 19 ರಂದಿನ ಸಮಾವೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಇದನ್ನೂ ನೋಡಿ : ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು