ಬೆಂಗಳೂರು | ₹11.20 ಲಕ್ಷದ ಬಹುಮಹಡಿ ಮನೆ ಹಂಚಿಕೆ ಕೋಗಿಲು ಲೇಔಟ್ ನಿವಾಸಿಗಳಿಗೆ ನೀಡಲು ಆದೇಶ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಗರ ಯಲಹಂಕ ವಲಯ ವ್ಯಾಪ್ತಿಯಲ್ಲಿ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶೆಡ್ ಗಳನ್ನು ನಿಮಿಸಲು ಅಕವಾಶ ಮಾಡಿಕೊಟ್ಟಿದ್ದ ಸರ್ಕಾರಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಖಚಿತಪಡಿಸಿದ್ದಾರೆ.

ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ನನ್ನ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್ ಅವರು ಕೋಗಿಲು ಬಡಾವಣೆ ಒತ್ತುವರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ್ದರು. ಸೋಮವಾರ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಅಧಿಕಾರಿಗಳ ಜೊತೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಸರ್ಕಾರಿ ಜಾಗದ ಬಳಕೆಯ ಉದ್ದೇಶ, ಅಕ್ರಮ ಒತ್ತುವರಿ, ತೆರವು, ಕ್ರಮಗಳ ಬಗ್ಗೆ ಸಿಎಂ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕನ್ನಡ ಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳು ರದ್ದು: ಸಿಎಂ ಸಿದ್ದರಾಮಯ್ಯ

ಸರ್ಕಾರದ ಜಾಗವಾಗಿದ್ದರಿಂದ ಅವರೆಲ್ಲರಿಗೂ ನೋಟಿಸ್ ನೀಡಿ, ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಅವರು ಖಾಲಿ ಮಾಡಿರಲಿಲ್ಲ. ಅನಿವಾರ್ಯವಾಗಿ ತೆರವು ಮಾಡಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಸುಮಾರು 167 ಶೆಡ್‌ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು.

ಪಾಲಿಕೆಯವರು ಕಸ ಹಾಕುತ್ತಿದ್ದು, ಭೂಮಿ‌ ಅವರ ಸ್ವಾಧೀನದಲ್ಲೇ ಇದೆ. ಸುಮಾರು 2020-21 ರಿಂದ ಈ ರೀತಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡು ವಾಸ ಮಾಡುತ್ತಿದ್ದರು, ಹೀಗಾಗಿ ಅಲ್ಲಿನ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ತಹಶಿಲ್ದಾರರಿಗೆ, ಶಿರಸ್ಥೆದಾರರಿಗೆ ಗೊತ್ತಿಲ್ಲದೆ ಹೀಗೆ ಒತ್ತುವರಿ ಆಗಲು ಸಾಧ್ಯವಿಲ್ಲ. ಕಸ ವಿಲೇವಾರಿ ಮಾಡುವ ಉದ್ದೇಶಕ್ಕೆ 15 ಎಕರೆ ಈ ಜಮೀನನ್ನು ಜಿಲ್ಲಾಧಿಕಾರಿಗಳು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು. ಇನ್ನುಮುಂದೆ ಇಂತಹ ಘಟನೆ ಮರುಕಳಿಬಾರದು ಎಂಬ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ. ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿ ವಾಸವಿದ್ದವರಲ್ಲಿ ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ, ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ‌ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.  ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್, ವಸತಿ ಸಚಿವರಾದ ಜಮೀರ್ ಅಹ್ಮದ್, ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡ ಅವರ ಜೊತೆ ಮಾತನಾಡಿ, ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚಿಸಲಾಗಿದೆ. ಅಲ್ಲೇ ಸಮೀಪದ ಬೈಯ್ಯಪ್ಪನಹಳ್ಳಿಯ ಸರ್ವೇ ನಂ‌.23 ರಲ್ಲಿ ಸುಮಾರು 1,087 ಮನೆಗಳಿವೆ, ಅಧಿಕಾರಿಗಳಿಂದ ಅರ್ಹರ ಪಟ್ಟಿ ಬಂದ ನಂತರ ಅವರಿಗೆ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆ ಮಾಡುತ್ತೇವೆ. ಇದು ಕೋಗಿಲು ಇಂದ ಕೇವಲ 7 ಕಿ.ಮೀ ದೂರದಲ್ಲಿದೆ.

ಜನರಲ್‌ಗೆ ಎಲ್ಲಾ ಸಬ್ಸಿಡಿ ಸೇರಿ 8 ಲಕ್ಷದ 70 ಸಾವಿರ ರೂಪಾಯಿ ಬರುತ್ತದೆ. ಎಸ್‌ಸಿ/ಎಸ್‌ಟಿ ಗಳಾದರೆ 9.50 ಲಕ್ಷ ಬರುತ್ತದೆ. ಆಮೇಲೆ ಜನರಲ್‌ಗೆ 2.5 ಲಕ್ಷವನ್ನು ಸಾಲದ ರೂಪದಲ್ಲಿ ಕೊಡತಕ್ಕದ್ದು. ಎಸ್‌ಸಿಎಸ್‌ಟಿಗೆ 1.70 ಲಕ್ಷ ಸಾಲ ಬರುತ್ತದೆ. ಇದನ್ನು ಜಮೀರ್‌ ಅಹ್ಮದ್‌ ಖಾನ್‌ ಅವರು ಸಾಲ ಕೊಡಿಸುವುದಾಗಿ ಹೇಳಿದ್ದಾರೆ. ಒಂದು ಮನೆಗೆ ಸುಮಾರು ₹11.20 ಲಕ್ಷ ವೆಚ್ಚವಾಗಿದ್ದು, ಇವನ್ನು ಕೊಡುತ್ತೇವೆ. ಸಾಮಾನ್ಯವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಬ್ಸಿಡಿ ಲಭ್ಯವಿದೆ. ಜೊತೆಗೆ ಜಿಬಿಎ ಇಂದ ಪ್ರತಿ ಮನೆಗೆ 5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಿದ್ದೇನೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಊಟ, ವಸತಿ, ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದೆ, ಅದರಂತೆ ಮೂರು ಕಡೆ ಈ ರೀತಿಯ ವ್ಯವಸ್ಥೆ ಮಾಡಿದ್ದರೂ ಅಲ್ಲಿನ ನಿವಾಸಿಗಳು ಹೋಗಿಲ್ಲ. ಇನ್ನೂ ಅಕ್ರಮ ಶೆಡ್‌ಗಳ ತೆರವುಗೊಳಿಸಿದ ವಿಚಾರದ ಬಗ್ಗೆ ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು ನನ್ನೊಂದಿಗೆ ಮತ್ತು ನಂತರ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದೇನೆ.

ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಮಾನವೀಯತೆ ದೃಷ್ಟಿಯಿಂದ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಬಡವರಿಗಾಗಿ 1ಲಕ್ಷ ಮನೆಗಳನ್ನು ಸರ್ಕಾರ ಕಟ್ಟಿಸಿದ್ದು, ಅವನ್ನು ಕೊಡುತ್ತೇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ನಾಳೆ, ನಾಡಿದ್ದು ಎರಡು ದಿನ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಜನವರಿ 1ರಂದು ಹೊಸ ವರ್ಷ ಪ್ರಾರಂಭದ ದಿನ ಇವರಿಗೆ ವಾಸಕ್ಕೆ ಮನೆಯನ್ನು ಒದಗಿಸಿಕೊಡುವ ಜವಾಬ್ದಾರಿಯನ್ನು ವಸತಿ ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ವಹಿಸಲಾಗಿದೆ.

ಈ ಜಾಗವನ್ನು ಸರ್ಕಾರವು ಸುಮಾರು 9-10 ವರ್ಷಗಳ ಹಿಂದೆಯೇ ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮಂಜೂರು ಮಾಡಿತ್ತು. ಆದರೆ, ಕೆಲವರು ಈ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಗುಡಿಸಲುಗಳನ್ನು ನಿರ್ಮಿಸಿದ್ದರು, ಹಲವಾರು ಬಾರಿ ಸಹ ನೋಟಿಸ್ ನೀಡಲಾಗಿತ್ತು. ನಂತರ ನಮ್ಮ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಅಕ್ರಮವಾಗಿ ಶೆಡ್ ನಿರ್ಮಿಸಲು ಬಿಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಕೇರಳದ ಮುಖ್ಯಮಂತ್ರಿಗಳು ಸೇರಿದಂತೆ ಕಮ್ಯುನಿಸ್ಟ್ ಪಕ್ಷದ ನಾಯಕರು ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅಲ್ಪಸಂಖ್ಯಾತರ ಓಲೈಕೆಗಾಗಿ ಸುಳ್ಳು ಸಹಾನುಭೂತಿ ತೋರುತ್ತಿದ್ದಾರೆ. ಇನ್ನು ಕೆಲವು ವ್ಯಕ್ತಿಗಳು ಬಡವರಿಂದ ಹಣ ಪಡೆದು ಸರ್ಕಾರಿ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಇದನ್ನೂ ನೋಡಿ : ಕುವೆಂಪು ಜನ್ಮ ದಿನ | “ಬನ್ನಿ ಬನ್ನಿ ಲೋಕಗುರುಗಳೆಲ್ಲ ಬನ್ನಿ” ಹಾಡು : ಎಚ್.ವಿ. ನಟರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *