ಯಲಬುರ್ಗಾ: ಸರ್ಕಾರ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಎಂದು ಹೇಳುತ್ತಿರುವಾಗಲೇ, ಇಲ್ಲೊಂದು ಗ್ರಾಮದಲ್ಲಿ, ಚರಂಡಿ ಇಲ್ಲದೆ, ರಸ್ತೆಯೇ ಚರಂಡಿ ಆಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಬಣಗುಡುತ್ತಿರುವ ಗ್ರಾಮವೇ ಮದ್ಲೂರ ಗ್ರಾಮ. ತಾಲೂಕಿನ ಗೆದಗೇರಿ ಗ್ರಾಮ ಪಂಚಾಯಿತಿಗೆ ಸೇರಿದ ಮದ್ಲೂರ ಒಟ್ಟು 1,500 ಜನಸಂಖ್ಯೆ ಹೊಂದಿದ ಈ ಗ್ರಾಮದ ಜನತೆ ತೀವ್ರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಗ್ರಾಮೀಣ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಸಾಧ್ಯ ಎಂದು ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತ್ತಾರೆ. ಆದರೆ ಗ್ರಾಮದಲ್ಲಿ ಸರಿಯಾದ ಚರಂಡಿ ಇಲ್ಲದೆ ಮಳೆಗಾಲದಲ್ಲಿ ಗ್ರಾಮಸ್ಥರು ಸಂಚರಿಸಲು ತೀವ್ರ ಸಮಸ್ಯೆ ಉಂಟಾಗಿದೆ.
ಕೊಳಚೆ ನೀರಿನಲ್ಲೇ ಸಂಚಾರ
ಮಳೆಗಾಲ ಬಂದಾಗ ಗ್ರಾಮದಲ್ಲಿ ರಸ್ತೆಗಳ ಅವಾಂತರದಿಂದಾಗಿ ಕೊಳಚೆ ನೀರಿನಲ್ಲೇ ಸಂಚರಿಸಬೇಕಾಗಿದೆ. ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುರಕ್ಷಿತವಾಗಿ ರಸ್ತೆ ಮತ್ತು ಚರಂಡಿ ನಿರ್ಮಿಸಿ ಮಳೆ ನೀರು ಮತ್ತು ಮನೆಯ ದಿನ ಬಳಕೆಯ ನೀರು ಸರಾಗವಾಗಿ ಚರಂಡಿ ಮೂಲಕ ಹರಿದು ಹೋಗುವಂತೆ ಮಾಡಬೇಕು.
ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕದಿಂದ ಶುದ್ಧವಾಗಿರುವ ಕುಡಿಯುವ ನೀರು ಸಿಗದೇ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.
ಗ್ರಾಮದಲ್ಲಿ ವ್ಯವಸ್ಥಿತ ಚರಂಡಿ ಇಲ್ಲದಿರುವ ಕಾರಣ ರಸ್ತೆಯ ಮೇಲೆ ಕಲುಷಿತ ನೀರು ಹರಿಯುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಚಿವರಿಗೂ ಮನವಿ ನೀಡಿದರು, ಯಾವುದೇ ಪ್ರಯೋಜನ ಆಗಿಲ್ಲ. ಶುದ್ಧ ಕುಡಿಯುವ ನೀರು ಘಟಕ ಕೆಟ್ಟುನಿಂತು ಸುಮಾರು ದಿನಗಳು ಕಳೆದರೂ ದುರಸ್ತಿ ಮಾಡುವುದಕ್ಕೆ ಯಾವೊಬ್ಬ ಅಧಿಕಾರಿಗಳು ಮುಂದೆ ಬಂದಿಲ್ಲ. ನಮಗೆ ಕಲುಷಿತ ನೀರೇ ಗತಿಯಾಗಿದೆ ಎಂದು ಮದ್ಲೂರು ಗ್ರಾಮಸ್ಥರ ಆರೋಪವಾಗಿದೆ.
ವರದಿ: ದೇವರಾಜ ದೊಡ್ಡಮನಿ