ಮುಖ್ಯಮಂತ್ರಿಗಳು ದೊಡ್ಡವರಾ? ಆನಂದ್‌ಸಿಂಗ್ ದೊಡ್ಡವರಾ? ಬಳ್ಳಾರಿಯ ನೊಂದು ನಾಗರಿಕರ ಪ್ರಶ್ನೆ

ಬಳ್ಳಾರಿ: ಕೋವಿಡ್ ತೀವ್ರವಾಗಿ ಹರಡುತ್ತಿದ್ದಾಗಲೇ ಕಳೆದ ವರ್ಷ ನಡೆಯಬೇಕಿದ್ದ ಮದುವೆಗಳು ನಡೆಯಲಿಲ್ಲ. ಈ ವರ್ಷವಾದರೂ ಮದುವೆಯನ್ನು ಆಡಂಭರ, ಸಡಗರದಿಂದ ಮಾಡೋಣ ಅನ್ನುವಷ್ಟರಲ್ಲಿ ಎರಡನೆ ಅಲೆ ಶುರುವಾಗೇಬಿಡ್ತು. ಆದರೂ ಜನ ನಮ್ಮ ಹಣೆಬರಹ ಅಂದುಕೊಂಡು ಸರ್ಕಾರ ನೀಡಿರುವ ನಿಯಮಾವಳಿಗಳನ್ನು ಅನುಸರಿಸಿ ಮದುವೆಯನ್ನು ಬಸವನ ಜಯಂತಿಗೆ ಮಾಡೋಣ ಎಂದು ಮಹೂರ್ತವನ್ನು ನಿಗದಿ ಮಾಡಿಕೊಂಡಿದ್ದರು.

ಇದನ್ನು ಓದಿ: ಕೋವಿಡ್:‌ ಹೊಸ ಪ್ರಕರಣ ದಾಖಲು ತುಸು ಇಳಿಕೆ-ಸಾವು ಹೆಚ್ಚು

ಆದರೆ ಒಂದೆಡೆ ಸರ್ಕಾರ ಮದುವೆಗೆ ಹಸಿರು ನಿಶಾನೆ ತೋರಿ ಕೋವಿಡ್-19 ನಿಯಮಾವಳಿ ರೂಪಿಸಿದೆ. ನಾವು ಇದೇ ಬಸವ ಜಯಂತಿಯೆಂದು ಮನೆಯಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದೇವು. ಕೋವಿಡ್ ನಿಯಮಾವಳಿಗಳನ್ನು ಚಾಚು ತಪ್ಪದೇ ಪಾಲಿಸುತ್ತೇವೆ. ಆದರೂ ಸಚಿವ ಆನಂದ್ ಸಿಂಗ್ ಏಕಾಏಕಿ ಮದುವೆ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ? ಆನಂದ್ ಸಿಂಗ್‌ನವರು ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕಿಂತಲೂ ದೊಡ್ಡವರಾ? ಎಂದು ನೊಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆ ಅತಿ ಹೆಚ್ಚು ಸೋಂಕು ಮತ್ತು ಮೃತರ ಸಂಖ್ಯೆ ಹೆಚ್ಚಿಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿರುವುದನ್ನು ಸ್ವಾಗತಿಸುತ್ತೇವೆ. ಸರ್ಕಾರದ ಕ್ರಮಕ್ಕೆ ನಾವು ತಲೆ ಬಾಗುತ್ತೇವೆ. ಲಾಕ್ ಡೌನ್ ನಡುವೆಯೂ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮದುವೆಗೆ ಹಸಿರು ನಿಶಾನೆ ತೋರಿ ಕೊರೊನಾ ನಿಯಮಾವಳಿ ಪಾಲಿಸುವಂತೆ ಸೂಚಿಸಿದ್ದಾರೆ. ಅವರ ಈ ಕ್ರಮವನ್ನು ನಾವು ಶ್ಲಾಘಿಸುತ್ತೇವೆ.

ಇದನ್ನು ಓದಿ: ಬಿಬಿಎಂಪಿ ಇಂದಿರಾ ಕ್ಯಾಂಟೀನ್‌: ಆಹಾರ ನೀಡಲೂ ನಿರ್ಧಾರ

ಅದರಂತೆ ಮದುವೆಯ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳಲ್ಲಿ ನಡೆಸಲಾಗುತ್ತಿದೆ. ಜೊತೆಗೆ ಲಗ್ನಪತ್ರಿಕೆಗಳನ್ನು ಮುದ್ರಿಸಲಾಗಿದೆ. ರೇಷನ್ ಇತ್ಯಾದಿ ಸರುಕುಗಳನ್ನು ತಂದುಕೊಂಡಿದ್ದೇವೆ, ಇನ್ನುಳಿದ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಆದರೆ ನಮ್ಮ ಸಚಿವ ಆನಂದ್‌ಸಿಂಗ್ ಈ ರೀತಿ ಮದುವೆ ಕಾರ್ಯಗಳಿಗೆ ಅಡ್ಡಿಪಡಿಸಿರುವುದು ನಮಗೆ ಬೇಸರವನ್ನು ತಂದಿದೆ ಎಂದು ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ.

ವಧು-ವರರಿಗೆ ಬೇಕಾದ ಬಟ್ಟೆ, ಒಡವೆಗಳನ್ನೂ ಖರೀದಿ ಮಾಡಿದ್ದೇವೆ. ಮನೆಯಲ್ಲಿ ದೇವತಾ ಕಾರ್ಯಗಳನ್ನೂ ನಡೆಸಿದ್ದೇವೆ. ಕೇವಲ 40 ಜನರನ್ನು ಮಾತ್ರ ಆಹ್ವಾನಿಸಿ ಸರಳ, ಸಂಕ್ಷಿಪ್ತ ರೀತಿಯಲ್ಲಿ ಮದುವೆ ಕಾರ್ಯ ಮುಗಿಸಲು ಸಿದ್ಧರಾಗಿದ್ದೇವೆ. ಎಲ್ಲಾ ಸಂಪ್ರದಾಯ ಮುಗಿದ ಬಳಿಕ ಮದುವೆ ಆಗದೇ ಹೋದರೆ ಹೇಗೆ? ಈಗ ಏಕಾಏಕಿ ಮದುವೆ ಕಾರ್ಯಗಳಿಗೆ ಬ್ರೇಕ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶಗೊಂಡಿದ್ದಾರೆ.

40ಕ್ಕೂ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಂಡರೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿ. ಜಿಲ್ಲಾ ಪೊಲೀಸ್ ಇಲಾಖೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಲಿ. ಇಲ್ಲವೇ ಮದುವೆ ಕಾರ್ಯಕ್ರಮದಲ್ಲಿ ಪೊಲೀಸರನ್ನು ನಿಯೋಜಿಸಲಿ. ನಾವು ಸಾವಿರಾರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆಗೆ ಅಣಿಯಾಗಿದ್ದರೆ ಇತ್ತ ಸಚಿವ ಆನಂದ್ ಸಿಂಗ್ ಈ ನಿರ್ಧಾರ ಪ್ರಕಟಿಸಿರುವುದು ಎಷ್ಟರ ಮಟ್ಟಿಗೆ ಸರಿ? ಜಿಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗಾದರೂ ಜನರ ಬವಣೆಗಳು ಅರ್ಥವಾಗುತ್ತಿಲ್ಲವೇ? ಎಂದು ಮಕ್ಕಳ ಮದುವೆಗೆ ಅಣಿಯಾದ ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ವರ್ಷದಿಂದ ನಿರುದ್ಯೋಗ, ಬಡತನ, ಹಸಿವು, ರೋಗಬಾಧೆಗಳಿಂದ ನರಳುತ್ತಲೇ ಇದ್ದೇವೆ. ಕೊರೊನಾ ರೋಗಿಗಳಿಗೆ ಹಾಸಿಗೆ ಇಲ್ಲ, ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ರೆಮ್ಡಿಸಿವಿರ್ ಚುಚ್ಚು ಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಜೀವ ಉಳಿಯುವುದೇ ದುಸ್ತರವಾಗಿದೆ. ಯಾವಾಗ ಏನಾಗುತ್ತದೆಯೋ ಎನ್ನುವ ಭಯದಲ್ಲಿ ನಾವಿದ್ದೇವೆ. ಮಕ್ಕಳ ಕಲ್ಯಾಣವಾದರೂ ಸರಳವಾಗಿ ಮಾಡಲು ಸಿದ್ಧತೆ ನಡೆಸಿದ್ದರೆ ಸಚಿವ ಆನಂದ್ ಸಿಂಗ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಅಮಾನವೀಯವಾಗಿದೆ ಎಂದು ಪೋಷಕರು ದೂರುತ್ತಿದ್ದಾರೆ.

ಈ ವಿಷಯದಲ್ಲಿ ಜಿಲ್ಲಾಡಳಿತ ಅಂತಃಕರಣದ ಕಣ್ಣು ತೆರೆಯುವುದೇ? ಇಲ್ಲವೇ ? ಎಂದು ಕಾದು ನೋಡಬೇಕಿದೆ.

 

ವರದಿ: ಪಂಪನಗೌಡ.ಬಿ.ಬಳ್ಳಾರಿ

Donate Janashakthi Media

Leave a Reply

Your email address will not be published. Required fields are marked *