ಮುಖ್ಯಮಂತ್ರಿ ಬದಲಾವಣೆಯ ಮಾತು ಈಗೇಕೆ?

ಎಸ್.ವೈ. ಗುರುಶಾಂತ್

ಕರ್ನಾಟಕದ ಸಚಿವ ಸಂಪುಟದ ಪುನರ‍್ರಚನೆ ಅಥವಾ ಸೇರ್ಪಡೆಯ ಸುತ್ತ ಚರ್ಚೆಗಳು ಈ ವಾರದ ಆರಂಭದಲ್ಲಿ ಬಿರುಸಾಗಿದ್ದವು. ಅದಕ್ಕಾಗಿ ಕೆಲವರ ದೆಹಲಿ ದಂಡಯಾತ್ರೆ ನಡೆದಿದ್ದವು. ಆದರೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುವ ಮಾತುಗಳು ರಾಜ್ಯದ ರಾಜಕೀಯ ವಲಯವನ್ನು ಗೊಂದಲಗೊಳಿಸಿವೆ. ಇದಕ್ಕೆ ಚಾಲನೆ ಕೊಟ್ಟವರು ಯಾರೋ ಸಾಧಾರಣ ನಾಯಕರಲ್ಲ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬಿ.ಎಲ್. ಸಂತೋಷ್ ಅವರು ‘ಪದೇ ಪದೇ ಮುಖ್ಯಮಂತ್ರಿಗಳ ಬದಲಾವಣೆ ಬಿಜೆಪಿಯ ಶಕ್ತಿ’ ಎಂದು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಾತ್ರವಲ್ಲ, ಇದನ್ನು ಅನುಸರಿಸಿ ಅಮಿತ್ ಶಾ ರಾಜ್ಯಕ್ಕೆ ವಿಶೇಷ ಭೇಟಿಯನ್ನು ನೀಡಿ ಕುತೂಹಲ ಹೆಚ್ಚಿಸಿರುವುದು ಸಿ.ಎಂ. ಬದಲಾವಣೆಯ ಸುದ್ದಿಗಳಿಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿದೆ. ಇದರ ಜೊತೆಯಲ್ಲಿ ‘ಪಕ್ಷ ವನ್ನು ಅಧಿಕಾರಕ್ಕೆ ತರಲು ಎಲ್ಲಾ ತ್ಯಾಗಕ್ಕೂ ನಾವು ಸಿದ್ಧರಿರಬೇಕು’ ಎಂದು ಬೊಮ್ಮಾಯಿ ಅವರು ಹೇಳಿರುವುದು ಸಹಜ ಮಾತು ಎಂದು ಅನಿಸುವುದಿಲ್ಲ.

ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ಮತ್ತು ಆರೆಸ್ಸೆಸ್ ನಡೆಸಿರುವ ತಂತ್ರಗಾರಿಕೆಗಳ ಜಾರಿಯ ಪೂರ್ವ ಸಿದ್ಧತೆಯ ಮುನ್ಸೂಚನೆಯೂ ಇರಬಹುದು. ಆರ್.ಎಸ್.ಎಸ್. ಈಗಾಗಲೇ ಹಲವು ತಿಂಗಳುಗಳ ಹಿಂದಿನಿಂದಲೇ ಇಂತಹ ಒಂದು ಸೂಚನೆಯನ್ನು ನೀಡುತ್ತಿದೆ. ಹಂತಹಂತವಾಗಿ ಯಡಿಯೂರಪ್ಪನವರಿಂದ ಬೊಮ್ಮಾಯಿ ಅವರನ್ನು ಬಿಡಿಸಿ ಪೂರ್ಣಪ್ರಮಾಣದಲ್ಲಿ ಅಧಿಕಾರದ ನಿರ್ದೇಶನ ಸೂತ್ರಗಳನ್ನು ಕೈಗೆತ್ತಿಕೊಂಡಿದೆ. ಯಡಿಯೂರಪ್ಪನವರನ್ನು ಹಣಿದ ಮೇಲಾದರೂ ಅರ್ಧದಷ್ಟು ನಿಯಂತ್ರಣ ಮತ್ತು ನಿರ್ಧಾರದ ಶಕ್ತಿಗೆ ಯಡಿಯೂರಪ್ಪನವರ ಕೈಯಲ್ಲಿತ್ತು. ಅದನ್ನು ತಪ್ಪಿಸಲೆಂದೇ ಬೊಮ್ಮಾಯಿ ಅವರನ್ನು ಅಧಿಕಾರಕ್ಕೆ ತಂದದ್ದು ಎನ್ನುವುದು ಗೊತ್ತಿರುವ ಸಂಗತಿ.

ರಾಜ್ಯದಲ್ಲಿ ಕೋಮುದ್ವೇಷದ ಆಕ್ರಮಣಕಾರಿ ಚಟುವಟಿಕೆಗಳು ಹಿಂಸಾಚಾರ ಮತ್ತು ಪ್ರಚೋದನಾತ್ಮಕ ಕೃತ್ಯಗಳನ್ನು ಸಂಘಪರಿವಾರ ನಿರಾತಂಕವಾಗಿ ನಡೆಸಿದ್ದರೂ, ಸಾರ್ವಜನಿಕ ಸಂಪತ್ತನ್ನು ನಿರಾತಂಕದಿಂದ ಲೂಟಿ ಮಾಡುತ್ತಿದ್ದರೂ ಆರ್.ಎಸ್.ಎಸ್. ಗೆ ಸಮಾಧಾನ ಇದ್ದಂತಿಲ್ಲ.

ಆರ್.ಎಸ್.ಎಸ್. ಅಂದುಕೊಂಡಂತೆ ಅದರ ಅಜೆಂಡಾಗಳನ್ನು ಮುಂದೊತ್ತಲು ಬಸವರಾಜ ಬೊಮ್ಮಾಯಿ ಕೂಡ ಒಂದು ಸಣ್ಣ ಪ್ರಮಾಣದಲ್ಲಿ ಅಡ್ಡಿ ಎನಿಸುತ್ತಿರಬೇಕು. ಸಿ.ಎಂ.ಸ್ಥಾನದಲ್ಲಿ ತಮ್ಮ ಕೈ ಗೊಂಬೆಯನ್ನು ಸ್ಥಾಪಿಸಬೇಕು ಎನ್ನುವುದು ಸತತ ಇದ್ದೇ ಇದೆ.

ಪ್ರಬಲ ಜಾತಿಗೆ ಸೇರಿದ ಮುಖ್ಯಮಂತ್ರಿಯೊಬ್ಬರು ತಮ್ಮ ಸ್ಥಾನ ಬಲದಿಂದ ವ್ಯಕ್ತಿಗತ ಪ್ರಭಾವ ಬಲಗೊಳ್ಳದಂತೆ ಅಸ್ಥಿರತೆಯ ಭಾವನೆಯನ್ನು ಸೃಷ್ಟಿಸುವುದು ಇದರ ಒಂದು ಮುಖ್ಯವಾದಂತಹ ತಂತ್ರ ಇರಬಹುದು.

ಬಿಜೆಪಿ ಮತ್ತು ಆರೆಸ್ಸೆಸ್ ನಾಯಕತ್ವ ಹೇಳಿಕೊಳ್ಳುವಂತೆ ಬೊಮ್ಮಾಯಿಯವರ ಆಡಳಿತ ಹಗರಣಗಳಿಂದ ಕೂಡಿದೆ ಎನ್ನುವುದು ನಿಜವಾದರೂ ಅವರೊಬ್ಬರೇ ಕಾರಣ ಎನ್ನುವುದೂ ಕೂಡ ಅರ್ಧಸತ್ಯ. ‘ಕೋತಿ ತಾನು ತಿಂದು ಮೇಕೆಗಳ ಬಾಯಿಗೆ ಬೆಣ್ಣೆ ಸವರಿದ’ ದ್ಯೋತಕ. ನಿಜಕ್ಕೂ ಈ ಸರಕಾರದ ಎಲ್ಲಾ ಭ್ರಷ್ಟಾಚಾರ ಹಗರಣಗಳಲ್ಲಿ ಯಾರ ಪಾಲು ಎಷ್ಟೆಷ್ಟು? ಆರೆಸ್ಸೆಸ್ಸಿನ ಪಾಲೆಸ್ಟು? ಬಿಜೆಪಿ ಹೈಕಮಾಂಡಿನ ಪಾಲೆಷ್ಟು? ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮಾಡಬಾರದ್ದನ್ನೆಲ್ಲಾ  ಮುಖ್ಯಮಂತ್ರಿ, ಮಂತ್ರಿಗಳಿಂದ ಮಾಡಿಸಿ ಅದರ ಲಾಭವನ್ನೆಲ್ಲ ಬಾಚಿಕೊಂಡ ಬಳಿಕ ಕೊನೆಗೆ ಕುಖ್ಯಾತಿಗೆ ಒಳಗಾದರೆ ಅದರ ಅಪಕೀರ್ತಿಯನ್ನು ಅವರ ತಲೆಗೆ ಕಟ್ಟುವುದು ಮತ್ತು ನೀತಿ ಬೋಧನೆಯ ಪಾಠ ಮಾಡುವುದು ಆರೆಸ್ಸೆಸ್-ಬಿಜೆಪಿ ಹೈಕಮಾಂಡ್ ಗಳ ಚಾಳಿ. ಅವರ ಪಕ್ಷದೊಳಗಿನಿಂದಲೇ ಬಹಿರಂಗ ಆರೋಪಗಳ ಧಾಳಿ ನಡೆಸುವುದು, ವಿರೋಧ ಪಕ್ಷಗಳಿಗೆ, ಮಾಧ್ಯಮಗಳಿಗೆ ಮಾಹಿತಿ-ಫೈಲ್ ಗಳ ಪೂರೈಕೆ ವ್ಯವಸ್ಥಿತವಾಗಿಯೇ ಮಾಡಲಾಗುತ್ತದೆ. ಶೂದ್ರ ಮುಖ್ಯಮಂತ್ರಿಗಳನ್ನು ಅಪಖ್ಯಾತಿಗೆ ಒಳಪಡಿಸಿ ಪದಚ್ಯುತಗೊಳಿಸುವ ಹುನ್ನಾರವೂ ಕೂಡ ನಡೆಯುತ್ತದೆ ಎನ್ನುವ ಆರೋಪಗಳು ಇವೆ. ಇದನ್ನು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವಾಗ ಕಂಡಾಗಿದೆ. ಆಗ ಎರಡುವರೆ ವರ್ಷ ಸಂಪನ್ಮೂಲವನ್ನು ಚೆನ್ನಾಗಿ ಕ್ರೋಡೀಕರಿಸಿ ಮತ್ತು ಎರಡುವರೆ ವರ್ಷ ಚುನಾವಣೆಗೆ ಗೆಲ್ಲಲು ಬೇಕಾದ ರೀತಿಯಲ್ಲಿ ಕೆಲಸ ಮಾಡಿ ಎನ್ನುವ ನಿರ್ದೇಶನ ಯಡಿಯೂರಪ್ಪನವರ ಕಾಲದಲ್ಲಿ ಆಂತರಿಕ ವಲಯದಲ್ಲಿ ಸುತ್ತಾಡುತ್ತಿರುವುದನ್ನೂ ಕಂಡಾಗಿದೆ.

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನತೆಯ ಮೇಲೆ ಹೊರಿಸುತ್ತಿರುವ ಹೊರೆಗಳಿಂದಾಗಿ ಹೆಚ್ಚುತ್ತಿರುವ ತೀವ್ರತರ ಅತೃಪ್ತಿ, ರಾಜ್ಯಗಳ ಸಂಪನ್ಮೂಲಗಳ ಸಂಗ್ರಹದ ಕುಸಿತ, ಕೇಂದ್ರ ನೀಡಬೇಕಾದ ಪಾಲಿನ ಕಡಿತ ಹಣಕಾಸಿನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪ್ರತಿಯೊಂದಕ್ಕೂ ಹೊರ ಸಾಲಗಳಿಂದ ನಿರ್ವಹಿಸಬೇಕೆಂಬ ವಿಪರೀತ ಸಾಲದ ಹೊರೆಯನ್ನು ಹೇರಿ ರಾಜ್ಯದಲ್ಲಿನ ಅಮೂಲ್ಯ ಆಸ್ತಿಗಳನ್ನು ಸಾಲ ಕೊಟ್ಟವರ ಸಂಸ್ಥೆಗಳಿಗೆ ಅಡವು ನೀಡಬೇಕಾಗಿಯೂ ಬಂದಿದೆ. ಇದೆಲ್ಲಾ ರಾಜ್ಯಗಳ ಅಭಿವೃದ್ಧಿಗೆ ಬಿದ್ದಿರುವ ಭಾರಿ ಹೊಡೆತ. ಇದರ ನಡುವೆಯೇ ಸಾರ್ವಜನಿಕ ಸಂಪನ್ಮೂಲಗಳ ಲೂಟಿ ಮತ್ತು ವ್ಯಾಪಕ ಭ್ರಷ್ಟಾಚಾರ. ಇದನ್ನು ಮುಚ್ಚಿಕೊಳ್ಳಲು ನಾಯಕತ್ವ ಬದಲಾವಣೆಯಂತಹ ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಸಂಘ ಪರಿವಾರ ಮತ್ತು ಬಿಜೆಪಿ ಹೈಕಮಾಂಡ್ ಮುನ್ನೆಲೆಗೆ ತರುತ್ತಲೇ ಇರುತ್ತವೆ.

ಇಡೀ ಅವಧಿ ಮಂತ್ರಿಗಳನ್ನಾಗಿಸಲು, ಮುಖ್ಯಮಂತ್ರಿಯನ್ನು ಬದಲಿಸಲು ಇರುವವರನ್ನು ತೆಗೆಯಲು ಮತ್ತು ಬೇಡವಾದವರನ್ನು ಉರುಳಿಸಲು ಸದಾ ಸಂಚುಗಳನ್ನು ರೂಪಿಸುತ್ತಿರುವುದು ಬಿಜೆಪಿ ಕಾರ್ಯಾಚರಣೆಯನ್ನು ನಡೆಸುತ್ತಿದೆ ದುರಾಡಳಿತದ ಫಲಶ್ರುತಿ. ಮುಂಬರುವ ಕರ್ನಾಟಕ ವಿಧಾನಸಭೆಯ ಚುನಾವಣೆಯ ಸಿದ್ಧತೆಗಳು ಅದರ ಕಾರ್ಯತಂತ್ರ ಹಾಗೂ ಸೂತ್ರಗಳನ್ನು ನೇರವಾಗಿ ಗೃಹಸಚಿವ ಅಮಿತ್ ಶಾ ವಹಿಸಿಕೊಂಡಿದ್ದಾರೆ ಮತ್ತು ಅವರದೇ ಆದ ಒಂದು ತಂಡ ಎಂದು ಬಿಜೆಪಿ ಹೇಳಿದೆ. ಈಗಿರುವ ಹಿರಿಯ ನಾಯಕರನ್ನು ಕೆಳಗಿಳಿಸಿ ಹೊಸಬರನ್ನು ಸ್ಥಾನಾಂತರಗೊಳಿಸುವ ಆಪರೇಷನ್ ಜಾರಿಯಲ್ಲಿದೆಯಂತೆ. ಅಂದರೆ ಇನ್ನೂ ಕೆಲವರನ್ನು ಕೆಳಗಿಳಿಸುವುದು ಅಧಿಕಾರಕ್ಕೆ ಅಂಟಿಕೊಂಡೇ ಇರುತ್ತೇವೆ ಎನ್ನುವವರನ್ನು ಪದಚ್ಯುತಗೊಳಿಸುವ ಕಾರ್ಯತಂತ್ರವೂ ಒಂದಿರಬಹುದು. ಒಟ್ಟಾರೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ ಮತ್ತು ಜನದ್ರೋಹಿ ನೀತಿಗಳನ್ನು ಮುಚ್ಚಿಟ್ಟು ಜನರನ್ನು ಹಾದಿತಪ್ಪಿಸುವ ವರಸೆಗಳು, ಅಧಿಕಾರ ಲಾಲಸೆಯ ಗುದ್ದಾಟಗಳು ಮತ್ತಷ್ಟೂ ಹೆಚ್ಚಬಹುದು.

Donate Janashakthi Media

Leave a Reply

Your email address will not be published. Required fields are marked *