ಬೆಂಗಳೂರು : ಹಿರಿಯ ವಿದ್ವಾಂಸ, ಚಿಂತಕ, ಲೇಖಕ , ಮೈಸೂರು ವಿವಿಯ ಹಂಗಾಮಿ ಕುಲಪತಿಯಾಗಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದ ಪ್ರೊ.ಮುಝಫರ್ ಹುಸೇನ್ ಅಸ್ಸಾದಿ ಅವರು ಶುಕ್ರವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ 2022ರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇದಕ್ಕೂ ಮೊದಲು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ, ಮುಖ್ಯಸ್ಥ ಹಾಗೂ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಆಗಿದ್ದರು.
ಉಡುಪಿ ಜಿಲ್ಲೆಯ ಶಿರ್ವ ಗ್ರಾಮದವರಾದ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಹಾಗೂ ಪಿಎಚ್ಡಿ, ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಪದವಿ ಪಡೆದಿದ್ದರು.
ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ 11 ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಪ್ರಶಸ್ತಿ ಪಡೆದಿದ್ದಾರೆ.
ಪ್ರೊ.ಮುಝಫರ್ ಅಸ್ಸಾದಿ ಅವರು ಬುಡಕಟ್ಟು ಸಮುದಾಯದವರ ಬದುಕು, ಜೀವನ ಶೈಲಿಯ ಬಗ್ಗೆ ಅಪಾರವಾದ ಅಧ್ಯಯನ ನಡೆಸಿದ್ದಾರೆ. ಆದಿವಾಸಿಗಳ ಸ್ಥಳಾಂತರಕ್ಕೆ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೃಷಿ ಅಧ್ಯಯನ ಕ್ಷೇತ್ರ, ಜಾಗತೀಕರಣ, ಗಾಂಧೀವಾದ, ರಾಜಕೀಯ ಸಮಾಜಶಾಸ್ತ್ರ, ಪ್ರಜಾಪ್ರಭುತ್ವ ಸಿದ್ಧಾಂತ, ಸಾಮಾಜಿಕ ಚಳವಳಿಗಳು, ತುಲನಾತ್ಮಕ ಸರ್ಕಾರ ಮತ್ತು ಭಾರತದಲ್ಲಿ ರಾಜಕೀಯ, ಮಾನವ ಹಕ್ಕುಗಳು, ಜಾಗತಿಕ ರಾಜಕೀಯ ಸಿದ್ಧಾಂತ ಮೊದಲಾದ ವಿಚಾರಗಳ ಕುರಿತು ಅಳವಾದ ಅಧ್ಯಯನ ಮಾಡಿ ವಿಷಯ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ.