ಎಂಆರ್‌ಪಿಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗವಿಲ್ಲ ಇದಕ್ಕೆ ಸಂಸದ ಶಾಸಕರೇ ಕಾರಣ

ಮಂಗಳೂರು: ಎಂಆರ್‌ಪಿಎಲ್ ಕಂಪನಿಯ 224 ಉದ್ಯೋಗದ ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಸ್ಥಳೀಯರಿಗೆ ಸಂಪೂರ್ಣವಾಗಿ ವಂಚನೆ ಎಸಗಲಾಗಿದೆ. ಇಲ್ಲಿನ ಬಹುತೇಕ ಉದ್ಯೋಗಿಗಳ್ಳಲಿ ದೂರದ ಉತ್ತರ ಪ್ರದೇಶ, ಬಿಹಾರದಿಂದಲೇ ಕನಿಷ್ಠ ನೂರು ಜನ ಅವಕಾಶ ಪಡೆದಿದ್ದು, ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಇಡೀ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಈ ಎಲ್ಲ ವೈಫಲ್ಯ ಮತ್ತು ವಂಚನೆಗಳಿಗೆ ಅವಳಿ ಜಿಲ್ಲೆಗಳ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಈ ಭಾಗದ ಶಾಸಕರುಗಳು ನೇರ ಕಾರಣರಾಗಿದ್ದು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ: ಕೋವಿಡ್‌ ನಿಭಾವಣೆಯಲ್ಲಿ ವಿಫಲರಾದ ಸರಕಾರದ ವಿರುದ್ಧ ಆಕ್ರೋಶಗೊಂಡ ರೈತ-ಕಾರ್ಮಿಕರು

ಎರಡು ವರ್ಷಗಳ ಹಿಂದೆ ಎಂಆರ್‌ಪಿಎಲ್ 224 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಡಿವೈಎಫ್ಐ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿತ್ತು. ಸ್ಥಳೀಯರಿಗೆ ಶೇಕಡಾ 80ರಷ್ಟು ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮತ್ತು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಕ್ಕೊತ್ತಾಯ ಮಂಡಿಸಿ, ಆಗ ಎಂಆರ್‌ಪಿಎಲ್ ಮುಂಭಾಗ ಸಾಮೂಹಿಕ ಧರಣಿಯನ್ನೂ ನಡೆಸಲಾಗಿತ್ತು.

ಪ್ರತಿಭಟನೆಯ ತೀವ್ರತೆಯಿಂದ ಎಚ್ಚೆತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ ಕಂಪೆನಿಗೆ ನೋಟೀಸು ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಪೆನಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿತ್ತು.

ಸಂಸದರಾದ ನಳಿನ್ ಕುಮಾರ್ ಕಟೀಲ್ ಸಹಿತ ಯಾವೊಬ್ಬ ಶಾಸಕರೂ ಆಗ ಧ್ವ‌ನಿಗೂಡಿಸಿರಲಿಲ್ಲ. ಇದೀಗ ಕೊರೊನಾ, ಲಾಕ್‌ಡೌನ್‌ ಗದ್ದಲಗಳ ಮಧ್ಯೆ ಕಂಪೆನಿ ತನ್ನ ಅಜೆಂಡಾ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡಕ್ಕೆ ಎರಡು, ಉಡುಪಿಗೆ ಎರಡು ಸಹಿತ ಇಡೀ ಕರ್ನಾಟಕಕ್ಕೆ ಕೇವಲ 13 ಸ್ಥಾನಗಳು ಮಾತ್ರ ದೊರಕಿದೆ. ಅದೇ ಸಂದರ್ಭ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಒಟ್ಟು ನೂರು ಸ್ಥಾನಗಳು ದೊರಕಿವೆ. ದಕ್ಷಿಣ ಭಾರತದ ಇತರ ರಾಜ್ಯಗಳ ಅಭ್ಯರ್ಥಿಗಳೂ ಅತಿ ಕಡಿಮೆ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು ಉತ್ತರ ಭಾರತದ ರಾಜ್ಯಗಳ‌ ಅಭ್ಯರ್ಥಿಗಳನ್ನೇ ಗುರುತಿಸಿ ಆಯ್ಕೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳ ಹಲವಾರು ಪ್ರತಿಭಾವಂತ ಯುವಜನರು ಅತ್ಯುತ್ತಮವಾಗಿ ಪರೀಕ್ಷೆ ಎದುರಿಸಿದ್ದರೂ ಅವರನ್ನು ಹೀನಾಯವಾಗಿ ಹೊರದಬ್ಬಲಾಗಿದೆ. ಈಗ ಆಯ್ಕೆಯಾಗಿರುವ ಉತ್ತರ ಭಾರತದ ಅಭ್ಯರ್ಥಿಗಳ ಸಾಮರ್ಥ್ಯದ ಕುರಿತೂ ಹಲವು ಅನುಮಾನಗಳು ವ್ಯಕ್ತವಾಗಿವೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಇದನ್ನು ಓದಿ: ಅಲೆಮಾರಿ ಶಿಳ್ಳೆಕ್ಯಾತ ಸಮುದಾಯ ಸ್ಥಳಕ್ಕೆ ಕೆ. ರವೀಂದ್ರ ಶೆಟ್ಟಿ ಭೇಟಿ

ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ, ಪಿತೂರಿ, ವಂಚನೆಯ ವಾಸನೆ ಹೊಡೆಯುತ್ತಿದೆ. ನೇಮಕಾತಿ ಅಧಿಕಾರಿ ಸಹಿತ ಕಂಪೆನಿಯ ಉನ್ನತ ಅಧಿಕಾರಿಗಳು, ಆಳುವ ಸರಕಾರದ ರಾಜಕಾರಣಿಗಳು ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ಈಗಿನ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯರಿಗೆ ಶೇಕಡಾ 80 ಮೀಸಲಿನೊಂದಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಹಾಗೂ ನಡೆದಿರುವ ನೇಮಕಾತಿ ಪ್ರಕ್ರಿಯೆಯ ಹಗರಣದ ಕುರಿತು ಉ‌ನ್ನತ ಮಟ್ಟದ ತ‌‌ನಿಖೆ ನಡೆಸುವಂತೆ ಡಿವೈಎಫ್ಐ ಒತ್ತಾಯಿಸಿದೆ.

ಈ ಎಲ್ಲಾ ಅಕ್ರಮ, ಸ್ಥಳೀಯರಿಗೆ ಆಗಿರುವ ಅನ್ಯಾಯಗಳಿಗೆ ತುಳುನಾಡಿನ ಸಂಸದರು, ಶಾಸಕರು ನೇರ ಹೊಣೆಯಾಗಿದ್ದು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ನೈತಿಕ ಹೊಣೆ ಹೊರಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *