ದಿಂಡೋರಿ (ಮಧ್ಯಪ್ರದೇಶ) : ಅರಣ್ಯವಾಸಿಯಾದ ಶಿವಪ್ರಸಾದ್ ಎಂಬವರು ಗ್ಯಾಂಗ್ರೀನ್ ಕಾಯಿಲೆಯಿಂದ ಬಳಲುತ್ತಿದ್ದು, ತನ್ನ ತಂದೆಯ ಚಿಕಿತ್ಸೆಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ತೆರಳಿದರೂ ಬೆಡ್ ಸಿಗದೇ ಕಂಗಾಲಾದ ಶಿವಪ್ರಸಾದ್ ಮಗಳು ತಂದೆಯನ್ನು ಹೆಗಲ ಮೇಲೆ ಹೊತ್ತು ಶಾಸಕರ ನಿವಾಸಕ್ಕೆ ಬಂದಿರುವ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶ ದಿಂಡೋರಿ ಜಿಲ್ಲೆಯ ಕುಗ್ರಾಮದಲ್ಲಿ ನಡೆದಿದ್ದು, ಕೊರೆವ ಚಳಿಯಲ್ಲಿ ಜಿಲ್ಲಾಸ್ಪತ್ರೆಗೆ ತೆರಳಿದರೆ ದಾಖಲಾಗಲು ಬೆಡ್ ಸಿಗದೇ ಇರುವುದರಿಂದ ದಿಕ್ಕುತೋಚದ ಮಗಳು ರಂಜಿತಾ, ತನ್ನ ಪರಿಸ್ಥಿತಿಯನ್ನು ವಿವರಿಸಲು ನೇರವಾಗಿ ಶಾಸಕರ ಮನೆಗೆ ಹೋಗುವ ನಿರ್ಧಾರ ಮಾಡಿದ್ದರು. ಜಿಲ್ಲಾಸ್ಪತ್ರೆಯಿಂದ ಶಾಸಕ ಓಂಕಾರ್ ಸಿಂಗ್ ಮಾರ್ಕಮ್ ಮನೆಗೆ ಅಂದಾಜು 2 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿಯವರೆಗೂ ತಂದೆಯನ್ನು ಹೆಗಲಿನ ಮೇಲೆ ಹೊತ್ತು ನಡೆದುಕೊಂಡೇ ತಲುಪಿದ್ದಾರೆ.
ಇದನ್ನು ಓದಿ: ವೈದ್ಯಕೀಯ ಸಾಮಾಗ್ರಿಗಳ ಕೊರತೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆಗೆ ಹರಸಾಹಸ
ಶಿವಪ್ರಸಾದ್ ಎಂಬ ವ್ಯಕ್ತಿಗೆ ಕೆಲವು ತಿಂಗಳ ಹಿಂದೆ ಕಾಲಿನ ಗ್ಯಾಂಗ್ರೀನ್ ಸಮಸ್ಯೆ ಉಂಟಾಗಿ, ಅವರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಚಿಕಿತ್ಸೆಗಾಗಿ ಭೋಪಾಲ್, ಜಬಲ್ಪುರ ಮತ್ತು ದಿಂಡೋರಿಯ ಸರ್ಕಾರಿ ಆಸ್ಪತ್ರೆಗಳಿಗೆ ಕುಟುಂಬದವರು ಸಾಕಷ್ಟು ಬಾರಿ ಅಲೆದಾಟ ನಡೆಸಿದ್ದಾರೆ. ದಿಂಡೋರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗಲೂ ಚಿಕಿತ್ಸೆಗಾಗಿ ದಾಖಲಾಗಲು ಅಲ್ಲಿ ಕನಿಷ್ಠ ಹಾಸಿಗೆ ಸೌಲಭ್ಯವಿಲ್ಲ. ಇದರಿಂದ ಮನ ನೊಂದ ಮಗಳು ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಸಕರ ಮನೆಗೆ ಬಂದಿದ್ದಾರೆ.
ಮಗಳು ತನ್ನ ತಂದೆಯನ್ನು ಹೀಗೆ ಎತ್ತಿಕೊಂಡು ಬಂದ ದೃಶ್ಯ ಕಂಡು ಶಾಸಕರು ಮತ್ತು ಅಲ್ಲಿ ನೆರೆದಿದ್ದವರ ಗಮನ ಸೆಳೆದಿದೆ. ನೆರವು ಯಾಚಿಸಿ ತನ್ನಲ್ಲಿಗೆ ಬಂದ ಯುವತಿಗೆ ಶಾಸಕರು ಸಹಾಯಹಸ್ತ ಚಾಚಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಣಕಾಸಿನ ನೆರವು ನೀಡಿದ ಶಾಸಕರು, ದಿಂಡೋರಿಯ ಜಿಲ್ಲಾಸ್ಪತ್ರೆಯ ಮುಖ್ಯ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ಕರೆ ಮಾಡಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚನೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ