ನವದೆಹಲಿ: ಜಗತ್ತಿನ ದೈತ್ಯ ಸಾಮಾಜಿಕ ಮಾಧ್ಯಮ ತಾಣ ಟ್ವಿಟರ್ ಭಾರತ ಸರಕಾರದ ಒಬ್ಬ ಏಜೆಂಟರನ್ನು ತಮ್ಮ ಸಂಸ್ಥೆಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಸರಕಾರ ಬಲವಂತ ಮಾಡಿದೆ ಎಂದು ಅಲ್ಲಿನ ಭದ್ರತೆಯ ಮುಖ್ಯಸ್ಥರಾಗಿದ್ದ ಪೈಟರ್ ಝಟ್ಕೊ ಪ್ರಕಟಪಡಿಸಿದ್ದಾರೆ ಎಂಬ ವರದಿಗಳಿವೆ. ಈ ಗಂಭೀರ ಆರೋಪದ ಬಗ್ಗೆ ತುರ್ತಾಗಿ ಒಂದು ಬಹಿರಂಗ ನ್ಯಾಯಾಂಗ ತನಿಖೆ ನಡೆಸಿ ನಿಜ ಸಂಗತಿಗಳನ್ನು ಪ್ರಕಟಪಡಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಡಾ.ವಿ.ಶಿವದಾಸನ್ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಟ್ವಿಟರ್ ನೇಮಿಸಿಕೊಳ್ಳಲೇಬೇಕಾಗಿ ಬಂದ ಈ ನೌಕರರಿಗೆ ಭಾರತದಲ್ಲಿ “ಒಂದು ತೀವ್ರ ಪ್ರತಿಭಟನೆಗಳ ಸಂದರ್ಭದಲ್ಲಿ” ಸೂಕ್ಷ್ಮ ಬಳಕೆ ದತ್ತಾಂಶಗಳನ್ನು ಲಭ್ಯಗೊಳಿಸಬೇಕಾಗಿ ಬಂದಿತ್ತು ಎಂದು ಝಟ್ಕೊ ಹೇಳಿದ್ದಾರೆ. ಇದು 2021ರ ರೈತರ ದಿಲ್ಲಿ ಹೋರಾಟದ ಸಮಯ ಎಂದು ವರದಿಗಳು ಹೇಳುತ್ತವೆ.
ವರದಿಗಳ ಪ್ರಕಾರ ಝಟ್ಕೊರವರು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯಾಯ ಇಲಾಖೆಯ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಕಮಿಷನ್(ಎಸ್‍ಇಸಿ) ಮತ್ತು ಫೆಡರಲ್ ಟ್ರೇಡ್ ಕಮಿಷನ್(ಎಫ್‍ಟಿಸಿ)ಗೆ ಈ ಕುರಿತು ದೂರು ನೀಡಿದ್ದು ನ್ಯಾಯ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗಕ್ಕೆ ಈ ಕುರಿತ ಮಾಹಿತಿಗಳನ್ನು ನೀಡಿದ್ದಾರೆ.
ಈ ವಿಷಯಗಳನ್ನು ಆಗಸ್ಟ್ 29ರಂದು ಬರೆದ ಪತ್ರದಲ್ಲಿ ಪ್ರಧಾನ ಮಂತ್ರಿಗಳ ಗಮನಕ್ಕೆ ತರುತ್ತ , ಇದೊಂದು ಗಂಭೀರ ಆತಂಕದ ವಿಷಯ, ಈ ಬಗ್ಗೆ ಒಂದು ಗಂಭೀರ ತನಿಖೆಯನ್ನು ಆರಂಭಿಸುವ ಅಗತ್ಯವಿದೆ ಎಂದು ಡಾ.ಶಿವದಾಸನ್ ಹೇಳಿದ್ದಾರೆ. ಈ ವರದಿಗಳು ನಿಜವಾಗಿದ್ದರೆ, ಇದು ಭಾರತದ ಸಂವಿಧಾನ ಎತ್ತಿ ಹಿಡಿದಿರುವ ಎಲ್ಲ ಮೂಲ ನೀತಿಗಳು ಮತ್ತು ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜೀವನದ ಹಕ್ಕಿನ ಮುಖ್ಯ ಅಂಶವಾದ ಖಾಸಗಿತ್ವದ ಹಕ್ಕು, ಸಭೆ ಸೇರುವ ಹಕ್ಕು ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಮುಂತಾದವುಗಳನ್ನು ಇದು ಉಲ್ಲಂಘಿಸುತ್ತದೆಯಾದ್ದರಿಂದ ಈ ಆರೋಪಗಳ ಕುರಿತು ಒಂದು ಬಹಿರಂಗ ನ್ಯಾಯಾಂಗ ತನಿಖೆ ನಡೆಸುವ ತುರ್ತು ಅಗತ್ಯವಿದೆ, ಈ ಮೂಲಕ ನಿಜಸಂಗತಿಗಳು ಬೆಳಕಿಗೆ ಬರುವಂತಾಗಬೇಕು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಈ ಕಡೆಗೆ ಪ್ರಧಾನ ಮಂತ್ರಿಗಳು ತಕ್ಷಣ ಗಮನ ಹರಿಸಬೇಕು ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ.ಶಿವದಾಸನ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.