ಹನುಮಾನ್ ಚಾಲೀಸ ಪಠಿಸುವ ವಿವಾದ: ಸಂಸದೆ, ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುತ್ತೇವೆಂದು ಸವಾಲು ಹಾಕಿದ್ದ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಬಂಧಿಸಲಾಗಿದೆ.

ಪ್ರಕರಣದ ಆರೋಪಿಗಳಾದ ದಂಪತಿಗಳು ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ರಾತ್ರಿ ಕಳೆದಿದ್ದರು. ಇಂದು ಬಾಂದ್ರಾ ನ್ಯಾಯಾಲಯದ ರಜಾ ಪೀಠವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಅವರು ರಾಣಾ ದಂಪತಿಯನ್ನು 7 ದಿನಗಳ ಕಾಲ ಕಸ್ಟಡಿಗೆ ಕೋರಿದರು. ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ರಿಜ್ವಾನ್ ಮರ್ಚಂಟ್ ಈ ಮನವಿಯನ್ನು ವಿರೋಧಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಸೆಕ್ಷನ್‌ಗಳನ್ನು ಪ್ರಶ್ನಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಧೀಶ ಎ ಎ ಘಾನಿವಾಲೆ ಪೊಲೀಸ್ ಕಸ್ಟಡಿಗೆ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದರು. ನವನೀತ್ ಮತ್ತು ರವಿ ರಾಣಾ ಜಾಮೀನು ಅರ್ಜಿ ಸಲ್ಲಿಸಿದ್ದರೂ, ಏಪ್ರಿಲ್ 29 ರಂದು ನ್ಯಾಯಾಲಯದಿಂದ ವಿಚಾರಣೆ ನಡೆಯಲಿದೆ. ಅಮರಾವತಿ ಸಂಸದ ಮತ್ತು ಬದ್ನೇರಾ ಶಾಸಕರನ್ನು ಕ್ರಮವಾಗಿ ಬೈಕುಲ್ಲಾ ಜೈಲು ಮತ್ತು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗಿದೆ.

ಶಿವಸೇನೆ ಕಾರ್ಯಕರ್ತರ ಪ್ರತಿಭಟನೆಯ ಭಾರೀ ಹೈಡ್ರಾಮಾದ ಬಳಿಕ ದಂಪತಿಯನ್ನು ಉಪನಗರ ಖಾರ್‌ನಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು)ಮತ್ತು ಸೆಕ್ಷನ್ 135 ರ ಮುಂಬೈ ಪೊಲೀಸ್ ಕಾಯಿದೆ (ಪೊಲೀಸರ ನಿಷೇಧ ಆದೇಶಗಳ ಉಲ್ಲಂಘನೆ) ಅಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು(ಏಪ್ರಿಲ್‌ 24) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ  ಎದುರು ಹನುಮಾನ್ ಚಾಲೀಸ ಪಠಿಸುವುದಾಗಿ ದಂಪತಿಗಳು ಸವಾಲು ಹಾಕಿದ್ದರು. ಬಳಿಕ ಮಹಾರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಾವು ತಮ್ಮ ಸವಾಲಿನಿಂದ ಹಿಂದೆ ಸರಿದಿರುವುದಾಗಿ ದಂಪತಿ ಘೋಷಿಸಿದ್ದಾರೆ.

ಸಂಸದೆ ಮತ್ತು ಶಾಸಕನ ವಿರುದ್ಧ ಶಿವಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದಂಪತಿ ನಿವಾಸದೆದುರು ಜಮಾಯಿಸಿ ಪ್ರತಿಭಟಿಸಿದರು. ಶಿವಸೇನೆ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಭೇದಿಸಿ ಉಪನಗರ ಖಾರ್‌ನಲ್ಲಿರುವ ಶಾಸಕ ದಂಪತಿಗಳ ನಿವಾಸದ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು ಮತ್ತು ಶಿವಸೇನೆ ಕಾರ್ಯಕರ್ತರನ್ನು ಮುಂದೆ ಹೋಗದಂತೆ ತಡೆದರು.

ಪೊಲೀಸರು ‘ಮಾತೋಶ್ರೀ’ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ಜನಸಂದಣಿಯನ್ನು ತಪ್ಪಿಸಲು ಠಾಕ್ರೆ ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *