ನವದೆಹಲಿ : ಧ್ವಜ ಸಂಹಿತೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿ ಪರಿಸರ ಮತ್ತು ಸ್ಥಳೀಯ ಅರ್ಥವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಸಿಪಿಐ(ಎಂ) ಸಂಸದ ಡಾ.ಶಿವದಾಸನ್ ಗೃಹ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಧ್ವಜಸಂಹಿತೆ, 2002 “ಭಾರತದ ರಾಷ್ಟ್ರಧ್ವಜ ಕೈಯಿಂದ ನೂತಿರುವ ಮತ್ತು ಕೈಯಿಂದ ನೇಯ್ದಿರುವ ಉಣ್ಣೆ/ ಹತ್ತಿ/ ರೇಷ್ಮೆ ಖಾದಿಯಿಂದ ಮಾಡಿದ್ದಾಗಿರುತ್ತದೆ” ಎಂದು ಹೇಳಿತ್ತು. ಆದರೆ ಸರಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದ ಪ್ರಕಾರ ಯಂತ್ರದಿಂದ ತಯಾರಾದ ಪಾಲಿಯೆಸ್ಟರ್ ಬಾವುಟಗಳನ್ನು ಬಳಸಲು ಅನುಮತಿಯಿದೆ. ದೊಡ್ಡಪ್ರಮಾಣದಲ್ಲಿ ತಯಾರಾಗುವ ಪಾಲಿಯೆಸ್ಟರ್ ಯಂತ್ರ-ತಯಾರಿತ ಬಾವುಟ ಕೈಯಿಂದ ನೇಯ್ದ ಬಾವುಟಕ್ಕಿಂತ ಅಗ್ಗವಾಗುವುದರಿಂದ ಅದು ಮಾರುಕಟ್ಟೆಯನ್ನು ಆವರಿಸಿಕೊಂಡು ಬಿಡುತ್ತದೆ. ಹತ್ತಿ ಮತ್ತು ರೇಷ್ಮೆಯ ಬಾವುಟಗಳು ಪರಿಸರ-ಸ್ನೇಹಿ ಮತ್ತು ಕೈಯಿಂದ ನೇಯ್ದ ಬಾವುಟಗಳು ಸ್ಥಳೀಯ ಅರ್ಥವ್ಯವಸ್ಥೆಗೆ ಬೆಂಬಲ ನೀಡುತ್ತವೆ. ಆದರೆ ಪಾಲಿಯೆಸ್ಟರ್ ಬಾವುಟಗಳಗೆ ಅನುಮತಿ ಕೊಟ್ಟರೆ ವಿದೇಶಗಳಿಂದ ಬರುವ ಯಂತ್ರ-ತಯಾರಿತ ಮತ್ತು ಜೈವಿಕ-ಲೀನತೆ ಇಲ್ಲದ ಬಾವುಟಗಳು ರಾಶಿ ಬೀಳುತ್ತವೆ. ಇದು ಪರಿಸರ-ಸ್ನೇಹಿಯೂ ಅಲ್ಲದ, ಗುಡಿಕೈಗಾರಿಕೆಗೆ ಅನನುಕೂಲ ಉಂಟು ಮಾಡುವಂತದ್ದೂ ಎಂದು ಶಿವದಾಸನ್ ಆರೋಪಿಸಿದ್ದಾರೆ.
ಆದ್ದರಿಂದ ಗೃಹಮಂತ್ರಿಗಳು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಮತ್ತು ಈ ಹಾನಿಕಾರಕ ತಿದ್ದುಪಡಿಯನ್ನು ಹಿಂದಕ್ಕೆ ತಗೊಳ್ಳಬೇಕು ಎಂದು ಡಾ.ಶಿವದಾಸನ್ ಗೃಹಮಂತ್ರಿಗಳನ್ನು ಕೋರಿದ್ದಾರೆ.