ಬೆಂಗಳೂರು: ‘ಹೊರಾಟದ ಹಕ್ಕಿಗಾಗಿ ಜನಾಂದೋಲನ’ದ ವತಿಯಿಂದ ನಗರದ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಸೋಮವಾರ ನಡೆದ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದು, ಹಲವಾರು ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಗಾಂಧಿ ಪ್ರತಿಮೆಯಿಂದ ವಿಧಾನಸೌಧದ ಕಡೆಗೆ ರ‍್ಯಾಲಿ ಹೊರಟಾಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಎಲ್ಲ ಪ್ರತಿಭಟನೆಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೆ ಮಾಡಬೇಕು ಎಂಬ ಬಿಜೆಪಿ ಸರ್ಕಾರದ ನಿಯಮವೂ ಸಂವಿಧಾನ ವಿರೋಧಿಯಾಗಿದ್ದು, ಅದನ್ನು ವಾಪಾಸು ಪಡೆಯಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಪ್ರತಿರೋಧ ಜನರ ಮಧ್ಯೆ ಇರಬೇಕೆ ಹೊರತು, ಪ್ರೀಡಂ ಪಾರ್ಕ್‌ನ ಹಳೇ ಜೈಲಿನಲ್ಲಿ ಅಲ್ಲ ಎಂದು ಹೋರಾಟಗಾರರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಹಿಂದುತ್ವದ ಗೆಲುವಿಗೆ ವಾಟ್ಸ್ ಆ್ಯಪ್ ಅಪಪ್ರಚಾರ:ಬಿಜೆಪಿ ಐಟಿ ವಿಂಗ್ ಸಂಚು!
“ಹೋರಾಟಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸುವ ಪೋಲಿಸ್ ಆದೇಶವನ್ನು ಹಿಂಪಡೆಯಿರಿ ಎಂದು ನಾವು ರಾಜ್ಯ ಸರ್ಕಾರಕ್ಕೆ ಪದೇ ಪದೇ ಒತ್ತಾಯಿಸಿದ್ದೇವೆ. ಆದರು ಅವರು ಹಿಂಪಡೆಯಲಿಲ್ಲ. ಹಾಗಾಗಿ ಗಾಂಧಿ ಜಯಂತಿ ದಿವಸ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಅಲ್ಲಿಂದ ವಿಧಾನಸೌಧದ ವರೆಗೂ ರ‍್ಯಾಲಿ ಹೊರಟಿದ್ದೆವು. ಆದರೆ ಪೊಲೀಸರು ನಮ್ಮನ್ನು ವಶಕ್ಕೆ ಪಡೆದಿದ್ದಾರೆ” ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಅಕ್ಕಿ ಜನಶಕ್ತಿ ಮೀಡಿಯಾಗೆ ಹೇಳಿದ್ದಾರೆ.
ಹೋರಾಟಗಾರರನ್ನು ವಶಕ್ಕೆ ಪಡೆದು ನಗರ ಸಶಸ್ತ್ರ ಮೀಸಲು ಪಡೆ(ಕೇಂದ್ರ) ಇದರ ಉಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಡಲಾಗಿದೆ ಎಂದು ಅವರು ಹೇಳಿದ್ದಾರೆ. “ಬೆಂಗಳೂರು ನಗರ ಪೋಲೀಸರು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರತಿಭಟನೆ ಮಾಡುವವರನ್ನು ಎಳೆದುಕೊಂಡು, ತಳ್ಳಿ ಬಸ್‌ನಲ್ಲಿ ಬಂಧಿಸಿ ಕರೆತಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
ಹೋರಾಟದಲ್ಲಿದ್ದ ಹಿರಿಯ ಸಾಹಿತಿ ದು.ಸರಸ್ವತಿ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಮಾವಳ್ಳಿ ಶಂಕರ್, ಸಿಪಿಐ(ಎಂ) ಪಕ್ಷದ ಜಿ.ಎನ್. ನಾಗರಾಜ್, AILAJ ವಕೀಲರ ಸಂಘಟನೆಯ ಮೈತ್ರೆಯಿ, AICCTU ನ ರಾಷ್ಟ್ರೀಯ ನಾಯಕರಾದ ಕ್ಲಿಫ್ಟನ್ ರೊಜಾರಿಯೋ, ಸಾಲಿಡಾರಿಟಿ ಯುತ್ ಮೂವ್ಮೆಂಟ್ ನ ಲಬೀದ್ ಸೇರಿದಂತೆ ಹಲವಾರು ಹೋರಾಟಗಾರರನ್ನು ಬಂಧಿಸಿದ್ದಾರೆ.
ವಿಡಿಯೊ ನೋಡಿ: ಹೋರಾಟದ ಹಕ್ಕಿಗಾಗಿ ಆಂದೋಲನ – ಪ್ರತಿಭಟನೆಕಾರರ ಬಂಧನ