ಮಲಪ್ಪುರಂ: 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ದೇಶಕ್ಕೆ ಗಮನ ಸೆಳೆದಿದ್ದಾರೆ. ಎಲ್ಲ ಪ್ರಶಂಸೆಗೆ ಒಳಗಾಗಿರುವ ತಾಯಿ ಬಿಂದು ಹಾಗೂ ಮಗ ವಿವೇಕ್ ಸಂತಸಗೊಂಡಿದ್ದಾರೆ.
ಅರಿಕೋಡ್ ನಿವಾಸಿ ಬಿಂದು ಮತ್ತು ಅವರ ಪುತ್ರ ವಿವೇಕ್ ಈ ಅಪರೂಪದ ಸಾಧನೆ ಮಾಡಿದವರು. ಪಿಎಸ್‌ಸಿ ಪರೀಕ್ಷೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ಒಂದೇ ಬಾರಿ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಎಲ್‌ಜಿಎಸ್ ರ‍್ಯಾಂಕ್ ಪಟ್ಟಿಯಲ್ಲಿ ಬಿಂದು 92ನೇ ರ‍್ಯಾಂಕ್ ಹಾಗೂ ಪುತ್ರ ವಿವೇಕ್ ಎಲ್ಡಿಸಿಯಿಂದ 38ನೇ ರ‍್ಯಾಂಕ್ ಗಳಿಸಿದ್ದಾರೆ. ಇಬ್ಬರೂ ಅರಿಕೋಡ್ ಪಿಎಸ್‌ಸಿ ಕೋಚಿಂಗ್ ಸೆಂಟರ್‌ನ ಅಭ್ಯರ್ಥಿಗಳು.
ನಾವು ಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರ ಮಾಡಿದಾಗ ತಂದೆ ನಮಗೆ ಬೇಕಾದ ಎಲ್ಲಾರೀತಿಯ ಸೌಲಭ್ಯಗಳನ್ನು ಮಾಡಿದರು. ನಮ್ಮ ಶಿಕ್ಷಕರಿಂದಲೂ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದರೂ ನಾವು ಒಟ್ಟಿಗೆ ತೇರ್ಗಡೆಯಾಗುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಈಗ ನಮಗೆ ತುಂಬಾ ಸಂತೋಷವಾಗಿದೆ ಎಂದು ವಿವೇಕ್ ಹೇಳಿದ್ದಾರೆ.
ಬಿಂದು ಕಳೆದ ಹನ್ನೊಂದು ವರ್ಷಗಳಿಂದ ಅರಿಕೋಡು ಮಟಕ್ಕೋಡು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಪಾಠ ಮಾಡುತ್ತಿದ್ದಾರೆ. 2019-20ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಎಂದು ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮನೆ ಕೆಲಸ ಮತ್ತು ಅಂಗನವಾಡಿ ಕೆಲಸದ ನಡುವೆಯೂ ಅವರು ಪರೀಕ್ಷೆಗೂ ಮುಂಚಿತ 6 ತಿಂಗಳಿರುವಾಗ ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದರು. ಬಿಂದು ಅವರು ಕಳೆದ ಏಳು ವರ್ಷಗಳಲ್ಲಿ ಎರಡು ಬಾರಿ ಎಲ್‌ಡಿಸಿ ಮತ್ತು ಎಲ್‌ಜಿಎಸ್ ಪರೀಕ್ಷೆ ಬರೆದಿದ್ದಾರೆ. ಬಿಡುವಿನ ವೇಳೆಯನ್ನೆಲ್ಲ ಅಧ್ಯಯನಕ್ಕೆ ಮೀಸಲಿಟ್ಟಿದ್ದರು. ಸರ್ಕಾರಿ ನೌಕರಿ ಪಡೆಯುವ ಕನಸು ಇದಕ್ಕೆ ಕಾರಣವಾಯಿತು ಎನ್ನುತ್ತಾರೆ.
ಮಗ 10ನೇ ತರಗತಿಯಲ್ಲಿದ್ದಾಗ ಆತನೊಂದಿಗೆ ತಾನೂ ಕುಳಿತು ಪುಸ್ತಕಗಳನ್ನು ಓದಲು ಆರಂಭಿದೆ. ಪಬ್ಲಿಕ್ ಪರೀಕ್ಷೆಯಾಗಿದ್ದರಿಂದ ಮಗನಿಗೆ ಒಬ್ಬನೇ ಓದಲು ಹೇಳಿದರೆ ಆತನಿಗೆ ಬೋರ್ ಆಗಬಹುದು ಎಂಬ ಕಾರಣಕ್ಕೆ ಆತನೊಂದಿಗೆ ತಾನೂ ಕುಳಿತು ಇಬ್ಬರೂ ಪುಸ್ತಕ ಓದಲಾರಂಭಿಸಿದೇವೆ ಎಂದು ಬಿಂದು ಅವರು ನೆನಪು ಮಾಡಿಕೊಂಡರು.
ಜೊತೆಯಲ್ಲಿ ಕೂತ ಅಭ್ಯಾಸ ಮಾಡುತ್ತಿದ್ದರಿಂದ ಕೇರಳ ಪಿಎಸ್‌ಸಿ ಪರೀಕ್ಷೆಗೆ ತಯಾರಾಗಲು ಪ್ರೇರಣೆ ಸಿಕ್ಕಿತು. 9 ವರ್ಷಗಳ ಬಳಿಕ ಇದೀಗ ಬಿಂದು ಮತ್ತು ಅವರ ಮಗ ವಿವೇಕ್ ಒಟ್ಟಿಗೆ ಸರ್ಕಾರಿ ಕೆಲಸವನ್ನು ಪಡೆಯಲು ಸಿದ್ಧರಾಗಿದ್ದಾರೆ. ಬಿಂದು ಅವರ ಪತಿ ಚಂದ್ರನ್ ಅವರು ಎಡಪಾಲ ಕೆಎಸ್‌ಆರ್‌ಟಿಸಿ ಡಿಪೋ ಉದ್ಯೋಗಿ. ಈ ದಂಪತಿಗೆ ಹೃದ್ಯ ಎಂಬ ಮಗಳೂ ಇದ್ದಾರೆ. ಈಗ ತಾಯಿ ಮತ್ತು ಮಗ ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಬಹುದು ಎಂಬ ಸಂಭ್ರಮ ಕುಟುಂಬದಲ್ಲಿ ಮೂಡಿದೆ.
ವಿವೇಕ್ ಅವರು ಮೂರು ಬಾರಿ ಪ್ರಯತ್ನಿಸಿದ ನಂತರ ಎಲ್‌ಜಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಂದು 4 ಬಾರಿ ಎಲ್‌ಡಿಸಿ ಪರೀಕ್ಷೆಯನ್ನು ಬರೆಯುವ ಮೂಲಕ ಉತ್ತೀರ್ಣರಾಗಿದ್ದಾರೆ.
ಕೇರಳದಲ್ಲಿ ಸ್ಟ್ರೀಮ್-2 ಹುದ್ದೆಗಳಿಗೆ ವಯಸ್ಸಿನ ಮಿತಿ 40. ಆದರೆ ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿನಲ್ಲಿ 3 ವರ್ಷಗಳವರೆಗೆ ಸಡಿಲಿಕೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ ಇದು 5 ವರ್ಷಗಳವರೆಗೆ ವಿನಾಯಿತಿ ಇರುತ್ತದೆ.